Advertisement

ಔಷಧಿ ಹೊರಗೆ ಖರೀದಿಸಲು ಚೀಟಿ ಕೊಟ್ರೆ ಕ್ರಮ: ಸಿಇಒ

11:55 AM Sep 16, 2017 | |

ಬಳ್ಳಾರಿ: ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಸಮರ್ಪಕವಾಗಿರುವಂತೆ ಮತ್ತು ರೋಗಿಗಳಿಗೆ ಲಭ್ಯವಾಗಿರುವಂತೆ ನೋಡಿಕೊಳ್ಳಬೇಕೆಂದು ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಡಿಎಚ್‌ಒ ಅವರಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗೆ ಸಂಬಂಧಿಸಿದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಯಾವುದೇ ಕಾರಣಕ್ಕೂ ಔಷಧಿ ವಿಷಯದಲ್ಲಿ ಚೀಟಿ ಕೊಟ್ಟು ಹೊರಗಡೆ ಕಳುಹಿಸುವ ಕೆಲಸ ಮಾಡಬಾರದು. ವಿಮ್ಸ್‌ನಲ್ಲಿ ಔಷಧಿಗಾಗಿ ಬಹುತೇಕ ಹೊರಗಡೆಯೇ ಚೀಟಿ ಬರೆದು ಕಳುಹಿಸುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ತಂಡಗಳನ್ನು ರಚಿಸಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿ ಪ್ರಮಾಣ ಲಭ್ಯವಿದ್ದು, ಚೀಟಿ ಬರೆದುಕೊಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಪ್ರತಿ ತಿಂಗಳು ಬೇಕಾಗುವ ಔಷಧ ಪ್ರಮಾಣ ಕುರಿತಂತೆ ಇಂಡೆಂಟ್‌ ನ್ನು ಕಳುಹಿಸಲಾಗುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಡ್ರಗ್ಸ್‌,ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ ಅವರು ಕಳುಹಿಸುತ್ತಿದ್ದಾರೆ. ಇದುವರೆಗೆ ವಿಶೇಷ ಘಟಕ ಯೋಜನೆ ಅಡಿ ಮಂಜೂರು ಆಗಿದ್ದ 592.87ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ
ಈಗಾಗಲೇ 260.49ಕೋಟಿ ರೂ. ಔಷಧಿಗಳನ್ನು ಅವರು ಪೂರೈಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಜಿ.ರಮೇಶಬಾಬು ಸಭೆಗೆ ಮಾಹಿತಿ ನೀಡಿದರು.

ಸಮಗ್ರ ಮಾತೃ ಆರೋಗ್ಯ ಪಾಲನೆ, ಶುಚಿ ಯೋಜನೆ, ಆಯುಷ್‌ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನ ಮತ್ತು ಇದುವರೆಗೆ ಖರ್ಚಾಗಿರುವ ಕುರಿತು ಅವರು ಸಭೆಗೆ ತಿಳಿಸಿದರು.

ಸಣ್ಣ ನೀರಾವರಿ ಕಾಮಗಾರಿಗಳ ಮಾಹಿತಿ ಕೊಡಿ: ಸಣ್ಣ ನೀರಾವರಿ ಇಲಾಖೆಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿ ಅಪಾರ ಪ್ರಮಾಣದಲ್ಲಿ ಹಣ ಹರಿದುಬರುತ್ತಿದೆ. ಆದರೆ ಆ ಇಲಾಖೆ ನಿರ್ಮಿಸುತ್ತಿರುವ ಕಾಮಗಾರಿಗಳ ಕುರಿತು ಬಹಳಷ್ಟು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಗಳಡಿ ಮಂಜೂರಾದ ವಿವಿಧ ಕಾಮಗಾರಿಗಳ ಸಂಪೂರ್ಣ ವಿವರ ಕೊಡಿ ಎಂದು ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಅಧಿಕಾರಿಗೆ ಸೂಚಿಸಿದರು.ಕಾಮಗಾರಿಗಳ ವಿವರ ಮತ್ತು ಅವುಗಳಿಗೆ ಅಳವಡಿಸಲಾದ ಜಿಪಿಎಸ್‌ ಕುರಿತು ವಿವರವನ್ನು ಶೀಘ್ರ ನೀಡಿ, ತಂಡ ನೇಮಿಸಿ ಪರಿಶೀಲನೆ ನಡೆಸಲಾಗುವುದು ಎಂದರು.

Advertisement

ಗಂಗಾಕಲ್ಯಾಣ ಯೋಜನೆ ಅಡಿ ಕೊರೆಯಿಸಲಾದ ಕೊಳವೆ ಬಾವಿಗಳಿಗೆ ಹಣ ತುಂಬಿದ ತಕ್ಷಣ ಜೆಸ್ಕಾಂನವರು
ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಎಚ್ಚರಿಸಿದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆಗೂಡಿ ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಬಾಲಕಾರ್ಮಿಕ ಯೋಜನಾ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.

ಕೃಷಿ, ಕೈಗಾರಿಕೆ, ತೋಟಗಾರಿಕೆ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಎಸ್‌ ಸಿಪಿ, ಟಿಎಸ್ಪಿ ಅಡಿ ಬಿಡುಗಡೆಯಾಗಿರುವ ಅನುದಾನ ಮತ್ತು ಆಗಿರುವ ಪ್ರಗತಿ ಕುರಿತು ಮಾಹಿತಿ ಪಡೆದ ಜಿಪಂ ಸಿಇಒ, ಕಳೆದ ವರ್ಷ ಜಿಲ್ಲೆಯ ಪ್ರಗತಿ ಚೆನ್ನಾಗಿದೆ. ಈ ವರ್ಷವು ಅದೇ ರೀತಿ ಸಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು. ಅಪರ ಜಿಲ್ಲಾಧಿಕಾರಿ ಎಸ್‌.ಜಿ.ಸೋಮಶೇಖರ್‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next