ತಾಳಿಕೋಟೆ: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಾತಿರಹಿತ, ಧರ್ಮರಹಿತವಾಗಿ ಕನ್ನಡ ಭಾಷೆ ಕಟ್ಟುವ ಕೆಲಸ ಎಲ್ಲರೂ ಮಾಡಬೇಕಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬದಲಾವಣೆ ತರುವ ಮೂಲಕ ಸಾಹಿತ್ಯ ಪರಿಷತ್ತಿಗೆ ಹೊಸ ಶಕ್ತಿ ತುಂಬಬೇಕಿದೆ ಎಂದು ತಜ್ಞ ವೈದ್ಯ ಡಾ| ಎ.ಎ. ನಾಲಬಂದ ಹೇಳಿದರು.
ಪಟ್ಟಣದ ಎಸ್‌ಕೆ ಹೈಸ್ಕೂಲ್‌ನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಸಿಂಪೀರ ವಾಲೀಕಾರ ಪರವಾಗಿ ಗುರುವಾರ ಮತಯಾಚಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆ ಅಪ್ಪಟ ಕನ್ನಡ ಸಾಹಿತ್ಯದ ತವರು ಬೇರು. ಇಂತಹ ಜಿಲ್ಲೆಯಲ್ಲಿ ಜಾತೀಯತೆ ಬೇಡ. ಎಲ್ಲರೂ ಒಂದೇ ಭಾವನೆ ಬೇಕು. ಸಾಹಿತ್ಯ ಪರಿಷತ್ ಬೆಳೆಸಿ ಪೋಷಿಸಿ ಎಲ್ಲ ತಾಲೂಕು- ಗ್ರಾಮೀಣ ಮಟ್ಟದಲ್ಲಿ ಸದಸ್ಯತ್ವ ಪಡೆದುಕೊಳ್ಳುವುದರೊಂದಿಗೆ ಪರಿಷತ್ತನ್ನು ಗಟ್ಟಿಗೊಳಿಸಿ ಬೆಳೆಸಬೇಕಿದೆ. ಅದಕ್ಕಾಗಿ ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕಿದೆ. ಈಗಾಗಲೇ ಅಭ್ಯರ್ಥಿ ಪ್ರೊ| ಹಾಸಿಂಪೀರ ವಾಲೀಕಾರ ಜೊತೆ ನಾನೂ ಮತದಾರರ ಬಳಿ ಹೋದಾಗ ಬದಲಾವಣೆ ಬಯಸಿದ್ದಾರೆ. ಜಾತ್ಯತೀತ ಮನೋಭಾವ ಹೊಂದಿರುವ ಪ್ರೊ| ಹಾಸೀಂಪೀರ ವಾಲೀಕಾರ ಅವರಿಗೆ ಬೆಂಬಲಿಸುವುದಾಗಿ ಒಪ್ಪಿದ್ದಾರೆ. ಹೀಗಾಗಿ ಬರುವ ಚುನಾವಣೆಯಲ್ಲಿ ಅಭ್ಯರ್ಥಿ ಹಾಸಿಂಪೀರ ವಾಲೀಕಾರ ಅವರಿಗೆ ಮತ ನೀಡಿ ಪರಿಷತ್ತು ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಎಸ್‌ಕೆ ಹೈಸ್ಕೂಲ್ ದೈಹಿಕ ಶಿಕ್ಷಕ ಆರ್.ಎಲ್. ಕೊಪ್ಪದ, ಪ್ರಾಚಾರ್ಯ ಎಸ್.ಡಿ. ಕರ್ಜಗಿ, ಆರ್.ಬಿ. ದಾನಿ, ಅನೀಲಕುಮಾರ ಇರಾಜ, ಬಿ.ಟಿ. ಸಜ್ಜನ, ಎ.ಟಿ. ಹರಿಜನ, ಎಸ್.ವಿ.ಬೆನಕಟ್ಟಿ, ಎ.ಎಚ್. ಹೂಗಾರ, ಆರ್. ಎಸ್. ಬೂದಿಹಾಳ, ಎಸ್.ಎಂ. ಪಾಟೀಲ, ಎಂ.ಎ.ಬಾಗೇವಾಡಿ, ಎಸ್.ಬಿ. ಪಾಟೀಲ, ಆರ್.ಸಿ. ರಾಠೊಡ, ಸಿ.ವಿ. ಮೆಣಸಿನಕಾಯಿ, ವೈ.ಎಸ್. ನಾದ, ಪಿ.ಬಿ. ಭಂಟನೂರ, ಆರ್. ಕೆ. ಮ್ಯಾಗೇರಿ, ಎಸ್.ವಿ. ಜಾಮಗೊಂಡಿ, ಎಂ.ಎಸ್. ರಾಯಗೊಂಡ ಇದ್ದರು.