ಡೆಹ್ರಾಡೂನ್: ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೂರಿನ ಮೇರೆಗೆ ಪೊಲೀಸರು ಆಸ್ಪತ್ರೆಯ ತುರ್ತು ಘಟಕ ವಿಭಾಗಕ್ಕೆ ಜೀಪನ್ನು ಕೊಂಡೊಯ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ರೋಗಿಗಳಿಂದ ತುಂಬಿದ ಆಸ್ಪತ್ರೆಯ ತುರ್ತು ಘಟಕದ ಒಳಗೆ ಪೊಲೀಸರು ಜೀಪ್ ಚಲಾಯಿಸಿಕೊಂಡು ಹೋಗುತ್ತಿರುವುದು ಕಾಣಬಹುದು ಇನ್ನೂ ಕೆಲವು ಸಿಬಂದಿಗಳು ವಾಹನ ಸವಾರಿಗೆ ಸಹಕಾರಿಯಾಗುವಂತೆ ಅಲ್ಲಿರುವ ಟ್ರಾಲಿಗಳನ್ನು ಬದಿಗೆ ಸರಿಸುತ್ತಿರುವುದು ಕಾಣಬಹುದು.
ನರ್ಸಿಂಗ್ ಅಧಿಕಾರಿಯಾಗಿರುವ ಆರೋಪಿ ಸತೀಶ್ ಕುಮಾರ್ ಆಪರೇಷನ್ ಥಿಯೇಟರ್ ನಲ್ಲೇ ಮಹಿಳಾ ವೈದ್ಯೆ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಎನ್ನಲಾಗಿದೆ, ಅಲ್ಲದೆ ವೈದ್ಯೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದಾಗಿ ರಿಷಿಕೇಶ ಪೊಲೀಸ್ ಅಧಿಕಾರಿ ಶಂಕರ್ ಸಿಂಗ್ ಬಿಶ್ತ್ ಹೇಳಿದ್ದಾರೆ. ಆರೋಪಿಯನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿ ವೈದ್ಯರು ಆಸ್ಪತ್ರೆ ಎದುರು ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆ ಆಸ್ಪತ್ರೆಯ ಮುಂದೆ ವೈದ್ಯರು ಜಮಾಯಿಸಿದ್ದರಿಂದ ಆರೋಪಿಯನ್ನು ಬಂಧಿಸಲು ಪೊಲೀಸರು ಪೊಲೀಸ್ ವಾಹನವನ್ನೇ ಆಸ್ಪತ್ರೆ ಒಳಗೆ ತೆಗೆದುಕೊಂಡು ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸತೀಶ್‌ಕುಮಾರ್ ಮಾಡಿರುವ ತಪ್ಪಿಗೆ ಕೇವಲ ಅಮಾನತು ಮಾಡುವ ಬದಲು ವಜಾಗೊಳಿಸಬೇಕು ಎಂದು ವೈದ್ಯರು ಘೋಷಣೆ ಕೂಗುತ್ತಿದ್ದಾರೆ, ಅಲ್ಲದೆ ಆರೋಪಿಯನ್ನು ವಜಾಗೊಳಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ವೈದ್ಯರು ನಿರ್ಧರಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.