ಚೆನ್ನೈ: ಸಮರ್ಪಕವಾಗಿ ಮಳೆ ಬಾರದಿದ್ದಾಗ ಕರ್ನಾಟಕದ ಹಲವು ಭಾಗಗಳಲ್ಲಿ ಕತ್ತೆಗಳ ಮದುವೆ, ಕಪ್ಪೆಗಳಿಗೆ ಮದುವೆ ಮಾಡಿಸುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಅದೇ ರೀತಿ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ನಂಬಿಕೆ, ರಿವಾಜುಗಳಿವೆ. ಕೊಯಂಬತ್ತೂರಿನ ಸಿರುಮುಗೈ ಸಮೀಪದ ತಿಮ್ಮರಾಯನಪಾಳ್ಯಂನ ನಿವಾಸಿಗಳು ಮಳೆ ಬರಲಿ ಎಂದು ಪ್ರಾರ್ಥಿಸಿ ಸಾವನ್ನಪ್ಪಿದ್ದ ಕೆಂಪು ಬಣ್ಣದ ಹದ್ದನ್ನು ಸಂಪ್ರಾಯಬದ್ಧವಾಗಿ ಅಂತಿಮ ವಿಧಿ ವಿಧಾನದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಿದ್ದರು. ಆದರೆ ಕಾಕತಾಳೀಯ ಎಂಬಂತೆ ಜನರ ನಂಬಿಕೆ ಹುಸಿಯಾಗಲಿಲ್ಲ..ಎಷ್ಟೋ ದಿನಗಳಿಂದ ಕೈಕೊಟ್ಟಿದ್ದ ಮಳೆರಾಯ..ದಿಢಿರನೆ ಸುರಿಯುವ ಮೂಲಕ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:Glass Bridge: ಪ್ರವಾಸಿಗರ ಆಕರ್ಷಣೆಗಾಗಿ ಕೇರಳದಲ್ಲಿ ಅತೀ ಉದ್ದದ ಗಾಜಿನ ಸೇತುವೆ ನಿರ್ಮಾಣ
ವರದಿಯ ಪ್ರಕಾರ, ನಿವೃತ್ತ ಶಿಕ್ಷಕಿ ಮಾರಿಯಮ್ಮ ಎಂಬವರ ಗದ್ದೆಯಲ್ಲಿ ಸಾವನ್ನಪ್ಪಿರುವ ಹದ್ದು ಕಂಡು ಬಂದಿತ್ತು. ಇದು ಅಶುಭ ಶಕುನ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದ್ದು, ಇದರಿಂದಾಗಿ ಮಳೆ ಬರುವುದಿಲ್ಲ ಎಂಬ ಆತಂಕ ಅವರದ್ದಾಗಿತ್ತು. ಆ ಹಿನ್ನೆಲೆಯಲ್ಲಿ ಹಲವಾರು ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯದಂತೆ ಮೃತ ಹದ್ದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು.
ಮೃತ ಹದ್ದಿಗೆ ಗಂಧದ ಚೂರ್ಣವನ್ನು ಲೇಪಿಸಿ, ಕುಂಕುಮ ಹಚ್ಚಿ, ಹೂವಿನ ಹಾರವನ್ನು ಹಾಕಿ ತಿಮ್ಮರನಪಾಳ್ಯಂ, ಇಲುಪ್ಪಪಾಳ್ಯಂ, ಗೋವಿಂದನೂರು ಮತ್ತು ಕೆಜಿಎನ್ ನಗರ ಸೇರಿದಂತೆ ಸಮೀಪದ ಗ್ರಾಮಗಳ ನೂರಾರು ಪುರುಷರು ಮತ್ತು ಮಹಿಳೆಯರು ಭವಾನಿ ನದಿಯ ಸ್ಮಶಾನದವರೆಗೆ ರಾಮ ನಾಮ, ಗೋವಿಂದ ಸ್ಮರಣೆಯೊಂದಿಗೆ ಮೆರವಣಿಗೆಯಲ್ಲಿ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂತ್ಯಕ್ರಿಯೆಯ ಬಳಿಕ ಅದರ ಬೂದಿಯನ್ನು ನದಿಯಲ್ಲಿ ಹಾಕಿ, ಮಳೆಗಾಗಿ ಪ್ರಾರ್ಥಿಸಿ ಜನರು ಹೊರಟು ಹೋಗಿದ್ದರು ಎಂದು ವರದಿ ವಿವರಿಸಿದೆ.
ನನ್ನ ಅಕ್ಕ ಮಾರಿಯಮ್ಮ ಅವರ ಗದ್ದೆಯಲ್ಲಿ ಹದ್ದು ಸಾವನ್ನಪ್ಪಿರುವುದು ಕಂಡು ಬಂದಿತ್ತು. ನಂತರ ನಾವು ಊರ ಹಿರಿಯರನ್ನು ಸಂಪರ್ಕಿಸಿದಾಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದರು. ಆ ಪ್ರಕಾರ ಅಂತ್ಯಸಂಸ್ಕಾರ ನಡೆಸಿ ಹೊರಟ ನಂತರ ಕಾಕತಾಳೀಯ ಎಂಬಂತೆ ಮಳೆ ಬಂದಿರುವುದಾಗಿ ಸಿರುಮುಗೈ ನಗರ ಪಂಚಾಯತ್ ಕೌನ್ಸಿಲರ್ ಜಿಎಸ್ ರಂಗರಾಜ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.