ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿ ಸಮೀಪ ಕುಖ್ಯಾತ ರೌಡಿ ನಿರವಿ ಮುರುಗನ್ ಎಂಬಾತನನ್ನು ದಿಂಡಿಗಲ್ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಹಿಜಾಬ್ ತೀರ್ಪಿನ ಕುರಿತು ಬಂದ್; ಪ್ರತಿಭಟನೆ ಅವರ ಹಕ್ಕು : ಸಿದ್ದರಾಮಯ್ಯ
ನಿರವಿ ಮುರುಗನ್ ವಿರುದ್ಧ ತಿರುನಲ್ವೇಲಿ, ಟುಟಿಕೋರಿನ್ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಕೊಲೆ, ಅಪಹರಣ ಸೇರಿದಂತೆ ಸುಮಾರು 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮುರುಗನ್, ದಿಂಡಿಗಲ್ ನ ಒಡ್ಡಾನ್ ಚತ್ರಂ ಪ್ರದೇಶದಲ್ಲಿ ನಡೆದ ದರೋಡೆ ಪ್ರಕರಣದ ಶಂಕಿತ ಆರೋಪಿಗಳಲ್ಲಿ ಒಬ್ಬನಾಗಿದ್ದ. ವೈದ್ಯರೊಬ್ಬರ ಮನೆಯಿಂದ 40 ಪವನ್ ಗಿಂತಲೂ ಅಧಿಕ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದಲ್ಲಿ ಮುರುಗನ್ ಶಾಮೀಲಾಗಿದ್ದ ಎಂದು ವರದಿ ತಿಳಿಸಿದೆ.
2004ರಲ್ಲಿ ತಮಿಳುನಾಡಿನ ಮಾಜಿ ಕಾನೂನು ಸಚಿವ ಅಲಾಡಿ ಅರುಣ್ ಅವರ ಹತ್ಯಾ ಪ್ರಕರಣದಲ್ಲೂ ಮುರುಗನ್ ಭಾಗಿಯಾಗಿದ್ದ. ಅಷ್ಟೇ ಅಲ್ಲ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ನಡೆಸಿದ್ದ ಅಪರಾಧ ಪ್ರಕರಣಗಳಲ್ಲಿ ಮುರುಗನ್ ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿರುವುದಾಗಿಯೂ ವರದಿ ವಿವರಿಸಿದೆ.
ತಿರುವನಲ್ವೇಲಿ ಜಿಲ್ಲೆಯ ಕಾಲಕ್ಕಾಡ್ ನಗರಸಭೆಯೊಳಗೆ ಮುರುಗನ್ ಅಡಗಿಕೊಂಡಿರುವ ಮಾಹಿತಿ ಮೇರೆಗೆ ದಿಂಡಿಗಲ್ ನ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಎಸಕ್ಕಿರಾಜಾ ಮುರುಗನ್ ಮೇಲೆ ಗುಂಡು ಹಾರಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.