ಚೆನ್ನೈ: ತಮಿಳುನಾಡಿನ ಅಣ್ಣಾ ವಿವಿಯಲ್ಲಿ ಹಣಕಾಸಿನ ಅವ್ಯವಹಾರಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಲಪತಿ ಎಂ.ಕೆ.ಸೂರಪ್ಪ ವಿರುದ್ಧ ತನಿಖೆ ನಡೆಸಲು ಸಮಿತಿ ರಚಿಸಿದೆ. ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಕಲೈಯರಸನ್ ಸಮಿತಿಯ ನೇತೃತ್ವ ವಹಿಸಿದ್ದಾರೆ. ಕುಲಪತಿ ವಿರುದ್ಧದ ಆರೋಪಗಳು ನಿಜವೆಂದಾದರೆ, ಅಂಥ ಪ್ರಕರಣ ಮರುಕಳಿಸದಂತೆ ಇರಲು ಯಾವ ಕ್ರಮಗಳನ್ನು ಸೂಚಿಸಬೇಕು ಎಂದು ಸಮಿತಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ವಿವಿಯಲ್ಲಿನ ಹಣಕಾಸು ಅಕ್ರಮ, ಸೆಮಿಸ್ಟರ್ ಪರೀಕ್ಷೆಗಳು ಮತ್ತು ಮೌಲ್ಯಮಾಪನದಲ್ಲಿ ಲೋಪ ಎಸಗಲಾಗಿರುವ ಬಗ್ಗೆ ಆರೋಪಗಳಿವೆ. ಹೀಗಾಗಿ ಕುಲಪತಿ ಎಂ.ಕೆ. ಸೂರಪ್ಪ ವಿರುದ್ಧ ತನಿಖೆಗೆ ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಖಾತೆ ನ.11ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಕುಲಪತಿ ವಿರುದ್ಧ ಆರು ದೂರುಗಳು ದಾಖಲಾಗಿವೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ.
ಇದನ್ನೂ ಓದಿ:ನ್ಯಾಯಾಂಗ ನಿಂದನೆ ಆರೋಪ; ಕ್ಷಮೆಯಾಚಿಸಲ್ಲ, ದಂಡ ಪಾವತಿಸಲ್ಲ ಎಂದ ಕುನಾಲ್ ಕಾಮ್ರಾ
ನ್ಯಾ.ಪಿ.ಕಲೈಯರಸನ್ ನೇತೃತ್ವದ ಸಮಿತಿ ಸೂರಪ್ಪ ಅವಧಿಯಲ್ಲಿ ಪಡೆಯಲಾಗಿರುವ ಶುಲ್ಕ, ನೀಡಲಾಗಿರುವ ನೆರವು, ಅನುದಾನ, ವಿವಿಧ ಸಂಸ್ಥೆಗಳ ಜತೆಗೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ಕೂಡ ತನಿಖೆ ನಡೆಸಲಿದೆ. ಕುಲಪತಿ ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆಯೂ ಅದು ತನಿಖೆ ನಡೆಸಲಿದೆ.
ಇತ್ತೀಚೆಗಷ್ಟೇ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಇತರರು ಕುಲಪತಿ ವಿರುದ್ಧ ಆರೋಪಗಳನ್ನು ಮಾಡಿ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದರು.