ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮುಕುಲ್ ರಾಯ್ ಪತ್ನಿ ಮಂಗಳವಾರ (ಜುಲೈ 06) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ 3ನೇ ಅಲೆ ಎದುರಿಸಲು ಸಲಹೆ : ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ
ಮುಕುಲ್ ರಾಯ್ ಪತ್ನಿ ಕೃಷ್ಣಾ ರಾಯ್ ಮಂಗಳವಾರ ನಸುಕಿನ ವೇಳೆ (4.35) ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದು, ಪಾರ್ಥೀವ ಶರೀರವನ್ನು ಬುಧವಾರ (ಜುಲೈ 07) ಕೋಲ್ಕತಾಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಕೃಷ್ಣಾ ರಾಯ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೃಷ್ಣಾ ರಾಯ್ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಅವರ ನಿಧನ ತೀವ್ರ ಆಘಾತವನ್ನು ತಂದಿದ್ದು, ಮುಕುಲ್ ರಾಯ್ , ಪುತ್ರ ಸುಬ್ರಾಂಗುಶ್ ರಾಯ್ ಮತ್ತು ಕುಟುಂಬ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಾ ರಾಯ್ ಅವರನ್ನು ಕೋಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ ಕಿಡ್ನಿ ಕಸಿಗಾಗಿ ಚೆನ್ನೈನ ಆಸ್ಪತ್ರೆಗೆ ಏರ್ ಆ್ಯಂಬುಲೆನ್ಸ್ ಮೂಲಕ ಕರೆದೊಯ್ದು ದಾಖಲಿಸಲಾಗಿತ್ತು ಎಂದು ವರದಿ ತಿಳಿಸಿದೆ.
ತೃಣಮೂಲ ಕಾಂಗ್ರೆಸ್ ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮುಕುಲ್ ರಾಯ್ ಅವರು ನಾಲ್ಕು ವರ್ಷಗಳ ಕಾಲ ಬಿಜೆಪಿ ಪಕ್ಷದಲ್ಲಿದ್ದು, ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.