ಕೋಲ್ಕತಾ : ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಸಿತಾಲ್ಕುಚಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಂಚಾಯತ್ ಮಟ್ಟದ ಲೀಡರ್, ಆಕೆಯ ಪತಿ ಮತ್ತು ಮಗಳನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಇನ್ನೊಬ್ಬ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಜೇವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದವರು ನೀಲಿಮಾ ಬರ್ಮನ್ (52), ಅವರ ಪತಿ ಬಿಮಲ್ ಕುಮಾರ್ ಬರ್ಮನ್ (68) ಮತ್ತು ಅವರ ಪುತ್ರಿ ರುನಾ ಬರ್ಮನ್ (24) ಎಂದು ಗುರುತಿಸಲಾಗಿದೆ. ದಂಪತಿಯ ಕಿರಿಯ ಪುತ್ರಿ ಇತಿ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಮುಖ ಆರೋಪಿಯನ್ನು ಸ್ಥಳೀಯರು ಹಿಡಿದು ಹಲ್ಲೆ ನಡೆಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಇನ್ನೂ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ ಎಂದು ಕೂಚ್ ಬೆಹಾರ್‌ನ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ವಿಭೂತಿ ಭೂಷಣ್ ರಾಯ್ ಮತ್ತು ಅವರ ಇಬ್ಬರು ಸಹಚರರು ಮನೆಗೆ ನುಗ್ಗಿ ನಸುಕಿನ 4.40 ರ ಸುಮಾರಿಗೆ ಕುಟುಂಬದ ಸದಸ್ಯರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬೊಬ್ಬೆಯನ್ನು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದರು ಮತ್ತು ವಿಭೂತಿ ಭೂಷಣ್ ರಾಯ್ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಪೊಲೀಸರಿಗೆ ಒಪ್ಪಿಸುವ ಮುನ್ನ ಸ್ಥಳೀಯರು ಆತನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
“ತನಿಖೆ ನಡೆಯುತ್ತಿದೆ. ಆದರೆ ಪ್ರಾಥಮಿಕ ತನಿಖೆಯು ಪ್ರೇಮ ಪ್ರಕರಣವನ್ನು ಸೂಚಿಸುತ್ತದೆ. ನಮಗೆ ಇನ್ನೂ ಯಾವುದೇ ರಾಜಕೀಯ ಆಯಾಮ ಸಿಕ್ಕಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.