Advertisement

ಸದನ ಕಾಡಿದ ಅಸ್ಸಾಂ ಗದ್ದಲ

06:00 AM Aug 02, 2018 | |

ಹೊಸದಿಲ್ಲಿ: ಅಸ್ಸಾಂನಲ್ಲಿನ ರಾಷ್ಟ್ರೀಯ ನಾಗರೀಕರ ನೋಂದಣಿ(ಎನ್‌ಆರ್‌ಸಿ) ಸಂಸತ್‌ನ ಉಭಯ ಸದನಗಳಲ್ಲೂ ಗದ್ದಲಕ್ಕೆ ಕಾರಣವಾಗಿದ್ದು, ಮೇಲ್ಮನೆ ಕಲಾಪ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಅತ್ತ ಲೋಕಸಭೆಯಲ್ಲೂ ತೃಣಮೂಲ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಸರಕಾರದ ವಿರುದ್ಧ ಮುಗಿಬಿದ್ದಿದ್ದು, ಇದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಮಧ್ಯೆ ಎನ್‌ಆರ್‌ಸಿ ವಿರೋಧಿಸುತ್ತಿರುವ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರ ಬೆಂಬಲವೂ ಸಿಕ್ಕಿದೆ.

Advertisement

ನಾಗರೀಕರ ರಾಷ್ಟ್ರೀಯ ನೋಂದಣಿ ಕರಡು ಪಟ್ಟಿ ಬಿಡುಗಡೆಯಾಗಿ ಈಗಾಗಲೇ ಎರಡು ದಿನ ಕಳೆದಿದ್ದು, ಲೋಕಸಭೆ ಮತ್ತು ರಾಜ್ಯಸಭೆಯೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಆಕ್ಷೇಪವೂ ಕೇಳಿಬರುತ್ತಿದೆ. ಅಲ್ಲದೆ ಇದನ್ನೇ ದಾಳವನ್ನಾಗಿರಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರು, ದಿಲ್ಲಿಯಲ್ಲೇ ಬೀಡುಬಿಟ್ಟು ವಿವಿಧ ರಾಜಕೀಯ ಪಕ್ಷಗಳ ನಾಯಕರ ಜತೆಗೂ ಮಾತುಕತೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕೆ ಕೈ ಬಲ ಮಾಡಿಕೊಳ್ಳುತ್ತಿದ್ದಾರೆ. 

ಈ ನಡುವೆ, ಎನ್‌ಆರ್‌ಸಿ ವಿವಾದ ಅಮಿತ್‌ ಶಾ ಅವರ ಕೋಲ್ಕತಾ ಭೇಟಿ ಮೇಲೂ ಪ್ರಭಾವ ಬೀರಿದೆ. ಬುಧವಾರ ಬೆಳಗ್ಗೆವರೆಗೂ ಶಾ ಅವರ ಆ.11ರ ರ್ಯಾಲಿಗೆ ಅನುಮತಿ ಸಿಕ್ಕಿರಲಿಲ್ಲ. ಆ.11ರಂದು ಕೋಲ್ಕತಾಗೆ ತೆರಳುತ್ತೇನೆ. ತಾಕತ್ತಿದ್ದರೆ ಬಂಧಿಸಿ ಎಂದು ಅಮಿತ್‌ ಶಾ, ಬ್ಯಾನರ್ಜಿಗೆ ಸವಾಲು ಹಾಕಿದ ಬೆನ್ನಲ್ಲೇ ರಾéಲಿಗೆ ಅನುಮತಿ ಸಿಕ್ಕಿತು. ಅದರಲ್ಲಿ  ಅಮಿತ್‌ ಶಾ ಅವರು ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಮಾತನಾಡಲಿದ್ದಾರೆ. ಇತ್ತ ಮಮತಾ ದಿಲ್ಲಿಯಲ್ಲಿ ಇತರೆ ಪಕ್ಷಗಳ ನಾಯಕರನ್ನು ಓಲೈಸುವ ನಡುವೆಯೇ, ಶಾ ಅವರು ಮಮತಾ ಅವರ ತವರಲ್ಲೇ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಪ್ರಸ್ತಾಪಿಸಿ ಇತರೆ ಮತಗಳನ್ನು ಕ್ರೋಢೀಕರಿಸುವ ಬಗ್ಗೆ ಪ್ಲಾನ್‌ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.  

ಕೋಲಾಹಲ: ರಾಜ್ಯಸಭೆಯಲ್ಲಿ ಬುಧವಾರ ಬೆಳಗ್ಗೆಯೇ ಗದ್ದಲ ಶುರುವಾಯಿತು. ಮಂಗಳವಾರ ತಮ್ಮ ಭಾಷಣ ಅರ್ಧ ಮಾಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಮತ್ತೆ ಮಾತನಾಡಲು ಅವಕಾಶ ಸಿಕ್ಕಿತು. ಆದರೆ, ಟಿಎಂಸಿ ಸದಸ್ಯರು ಭಾಷಣಕ್ಕೆ ಅಡ್ಡಿ ಮಾಡಿದರು. ಅಲ್ಲದೆ, ಮಂಗಳವಾರ ಶಾ ಮಾಡಿದ ಭಾಷಣದ ಕೆಲವೊಂದು ಪದಗಳನ್ನು ವಾಪಸ್‌ ಪಡೆಯಬೇಕು ಎಂದು ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಸ್ವತಃ ಆನಂದ್‌ ಶರ್ಮಾ ಅವರೇ ಸಭಾಪತಿ ಅವರಿಗೆ ಆಗ್ರಹಿಸಿದರು. ಅಲ್ಲದೆ ಮತ್ತೆ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟದ್ದಕ್ಕೂ ಟಿಎಂಸಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಭಾಪತಿ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು, ಮಂಗಳವಾರ ಅವರ ಭಾಷಣ ಅರ್ಧಕ್ಕೆ ನಿಂತಿದ್ದರಿಂದ ಮತ್ತೆ ಅವಕಾಶ ಕೊಡಲಾಗಿದೆ ಎಂದರು. ಆದರೂ ಶಾ ಅವರಿಗೆ ಭಾಷಣ ಮಾಡಲು ಅವಕಾಶ ಸಿಗಲೇ ಇಲ್ಲ. 

ದೇವೇಗೌಡ -ದೀದಿ ಭೇಟಿ 
ಎನ್‌ಆರ್‌ಸಿ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ದೇವೇಗೌಡ ಅವರು ಹೇಳಿದ್ದಾರೆ. ದಿಲ್ಲಿಯಲ್ಲಿರುವ ಕರ್ನಾಟಕ ಭವನ ದಲ್ಲಿ ಗೌಡರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ಬೆಂಬಲ ಕೋರಿದರು. ಇದಕ್ಕೆ ದೇವೇಗೌಡರು ಸಹಮತವನ್ನೂ ವ್ಯಕ್ತಪಡಿಸಿ ದರು. ಅಲ್ಲದೆ ಮುಂದಿನ ಜನವರಿ 19ರಂದು ಕೋಲ್ಕತಾದಲ್ಲಿ ನಡೆಯಲಿ ರುವ ಭಾರೀ ರ್ಯಾಲಿಗೂ ಮಮತಾ ಬ್ಯಾನರ್ಜಿ ಗೌಡರನ್ನು ಆಹ್ವಾನಿಸಿದರು. ಬಿಜೆಪಿ ನಾಯಕ ಎಲ್‌.ಕೆ .ಅಡ್ವಾಣಿ ಅವ ರನ್ನು ಭೇಟಿಯಾಗಿದ್ದರು.

Advertisement

ಮಮತಾ ವಿರುದ್ಧ ಪ್ರಕರಣ: ಎನ್‌ಆರ್‌ಸಿ ಕರಡು ಪಟ್ಟಿಯಿಂದ ಆಂತರಿಕ  ಯುದ್ಧ ಮತ್ತು ರಕ್ತಪಾತವಾಗಲಿದೆ ಎಂಬ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಾಗಿದೆ. ಅಸ್ಸಾಂನ ಲಖೀಂಪುರದಲ್ಲೇ, ಶಾಂತಿಕದಡುವ ಹೇಳಿಕೆ ನೀಡಿದ್ದಾರೆ‌ ಎಂದು ದೂರು ನೀಡಲಾಗಿದೆ. 

ಲೋಕಸಭೆಯಲ್ಲೂ ಎನ್‌ಆರ್‌ಸಿ ಗದ್ದಲ
ಕೆಳಮನೆಯಲ್ಲೂ ಕಾಂಗ್ರೆಸ್‌ ಮತ್ತು ಟಿಎಂಸಿ ಸದಸ್ಯರು ಪಟ್ಟಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಅಸ್ಸಾ ಜನರಲ್ಲಿ ಅಭದ್ರತೆ ಉಂಟು ಮಾಡುವ ಈ ಪಟ್ಟಿಯನ್ನು ರದ್ದು ಮಾಡಬೇಕು ಎಂದು ಟಿಎಂಸಿ ಸದಸ್ಯರು ಆಗ್ರಹಿಸಿದರು. ಅಲ್ಲದೆ ಈ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್‌ ನಾಯಕರಿಗೆ ಧೈರ್ಯವಿಲ್ಲ ಎಂಬ ಹೇಳಿಕೆ ನೀಡಿದ್ದ ಅಮಿತ್‌ ಶಾ ಅವರ ವಿರುದ್ಧ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ಇದು ಅಸ್ಸಾಂನ ಮಾಜಿ ಸಿಎಂ ತರುಣ್‌ ಗೋಗಾಯ್‌ ಅವರ ಕನಸು ಎಂದು ನೆನಪಿಸಿಕೊಟ್ಟರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಎನ್‌ಆರ್‌ಸಿ ವಿಚಾರದಲ್ಲಿ ಕಾಂಗ್ರೆಸ್‌ ನಿಲುವೇನು ಎಂಬ ಬಗ್ಗೆ ಸ್ಪಷ್ಟ ಮಾಡಲಿ ಎಂದು ಆಗ್ರಹಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next