ನಿಮಗೆ “ರಾಜು ರಂಗಿತರಂಗ’ ಸಿನಿಮಾ ಸೆಟ್ಟೇರಿದ್ದ ವಿಷಯ ಗೊತ್ತಿರಲೇಬೇಕು. ಸಕ್ಸಸ್‌ಫುಲ್ ಟೀಮ್‌ವೊಂದು ಸೇರಿಕೊಂಡು ಶುರುಮಾಡಿದ್ದ ಚಿತ್ರವಿದು. ಈಗೇಕೆ ಆ ಚಿತ್ರದ ವಿಷಯ ಅಂತೀರಾ? ಆ ಸಿನಿಮಾ ಬಗ್ಗೆ ಹೀಗೊಂದು ಸುದ್ದಿ ಬಂದಿದೆ. “ರಾಜು’ ತನ್ನ ಹೆಸರು ಬದಲಿಸಿಕೊಂಡಿರುವ ಸುದ್ದಿ ಅದು! ಹೌದು, “ರಾಜು ರಂಗಿತರಂಗ’ ಸಿನಿಮಾದ ಶೀರ್ಷಿಕೆಯನ್ನು ಬದಲಿಸಲಾಗಿದೆ.
ಈಗ ಚಿತ್ರಕ್ಕೆ “ರಾಜು ಕನ್ನಡ ಮೀಡಿಯಂ’ ಎಂದು ನಾಮಕರಣ ಮಾಡಲಾಗಿದೆ. ಈ ಕುರಿತು ವಿವರ ಕೊಡುವ ನಿರ್ಮಾಪಕ ಕೆ.ಎ.ಸುರೇಶ್, ಮೊದಲು “ರಾಜು ರಂಗಿತರಂಗ’ ಎಂದು ನಾಮಕರಣ ಮಾಡಲಾಗಿತ್ತು. ಚಿತ್ರೀಕರಣ ಕೂಡ ಶುರುವಾಗಿತ್ತು. ಆದರೆ, ನಮ್ಮ ಕಥೆಗೆ ಶೀರ್ಷಿಕೆ ಯಾಕೋ ಸರಿ ಹೊಂದುತ್ತಿಲ್ಲ ಅಂದೆನಿಸಿತ್ತು. ಕೊನೆಗೆ ಟೈಟಲ್ ಬದಲಿಸಬೇಕು ಎಂಬ ನಿರ್ಧಾರಕ್ಕೆ ಬಂದು, ಈಗ “ರಾಜು ಕನ್ನಡ ಮೀಡಿಯಂ’ ಎಂದು ನಾಮಕರಣ ಮಾಡಲಾಗಿದೆ.
ಈ ಶೀರ್ಷಿಕೆ ಈಗ ಹಂಡ್ರೆಡ್ ಪರ್ಸೆಂಟ್ ನಮ್ಮ ಕಥೆಗೆ ಹೊಂದಿಕೊಳ್ಳುತ್ತೆ. ಅದೇ ಸೂಕ್ತ ಎನಿಸಿದ್ದರಿಂದ ಅದನ್ನೇ ಪಕ್ಕಾ ಮಾಡಲಾಗಿದೆ’ ಎಂದು ಹೇಳುತ್ತಾರೆ ನಿರ್ಮಾಪಕ ಕೆ.ಎ.ಸುರೇಶ್. “ರಾಜು ರಂಗಿತರಂಗ’ ಎಂಬ ಶೀರ್ಷಿಕೆ ಇಡಲು ಇನ್ನೊಂದು ಕಾರಣವೂ ಇತ್ತು. “ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ರಾಜು ಎಂಬ ಹೆಸರನ್ನೇ ಇಟ್ಟುಕೊಂಡಿತು. ಇನ್ನು, ಚಿತ್ರದ ನಾಯಕ ಗುರುನಂದನ್‌ಗೆ ಆವಂತಿಕಾ ಶೆಟ್ಟಿ ನಾಯಕಿಯಾಗಿದ್ದರು.
ಆವಂತಿಕಾ ಶೆಟ್ಟಿ ಕೂಡ “ರಂಗಿತರಂಗ’ ಸಿನಿಮಾದ ನಾಯಕಿ. ಆ ಚಿತ್ರ ಕೂಡ ಗೆಲುವು ಕೊಟ್ಟ ಸಿನಿಮಾ. ಹಾಗಾರಿ “ರಾಜು ರಂಗಿತರಂಗ’ ಎಂಬ ಹೆಸರನ್ನಿಟ್ಟುಕೊಂಡೇ ಚಿತ್ರೀಕರಣಕ್ಕೆ ಹೊರಟ್ಟಿದ್ದರು ನಿರ್ದೇಶಕ ನರೇಶ್‌ಕುಮಾರ್. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇನ್ನು, ವಿದೇಶದಲ್ಲಿ ಹಾಡುಗಳನ್ನು ಚಿತ್ರೀಕರಿಸಬೇಕಿದೆ. “ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾ ಗೆದ್ದಿದ್ದೇ ತಡ, ಆ ನಾಯಕ ಗುರುನಂದನ್ ಮತ್ತು ನಿರ್ದೇಶಕ ನರೇಶ್‌ಕುಮಾರ್ ಮತ್ತು ಅವರ ತಂಡಕ್ಕೆ ಈ ಚಿತ್ರ ಮಾಡಲು ಅಣಿಯಾದರು ನಿರ್ಮಾಪಕ ಸುರೇಶ್.
ಅಂದಹಾಗೆ, ಕಳೆದ ವರ್ಷ “ಶಿವಲಿಂಗ ಚಿತ್ರದ ಯಶಸ್ಸಿನ ನಂತರ, ಯಶಸ್ವಿ ತಂಡದ ಜತೆಯಲ್ಲಿ “ರಾಜು ಕನ್ನಡ ಮೀಡಿಯಂ’ ಸಿನಿಮಾ ಮಾಡುತ್ತಿದ್ದಾರೆ ಸುರೇಶ್. ಇದೊಂದು ಲವ್ ಕಂ ಕಾಮಿಡಿ ಸಿನಿಮಾ ಆಗಿದ್ದು, ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವಂತಹ ಕಥೆ’ ಎನ್ನುತ್ತಾರೆ ಸುರೇಶ್. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. “ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ಒಂದು ಕಾಮಿಡಿ ಸಬೆjಕ್ಟ್ ಆಗಿ ಜನರಿಗೆ ಇಷ್ಟವಾಗಿತ್ತು. ಆ ಚಿತ್ರದ ಮೂಲಕ ಒಂದಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದು ಸುಳ್ಳಲ್ಲ. ಈಗ ಅದೇ ತಂಡ ಜೊತೆಯಾಗಿ ಮತ್ತೂಂದು ಸಿನಿಮಾ ಮಾಡುತ್ತಿದೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ, ಶೇಖರ್‌ಚಂದ್ರ ಛಾಯಾಗ್ರಹಣವಿದೆ.