ನವದೆಹಲಿ:ತೀಸ್ ಹಜಾರಿ ಕೋರ್ಟ್ ಸಂಕೀರ್ಣದಲ್ಲಿ ದೆಹಲಿ ಪೊಲೀಸರು ಮತ್ತು ವಕೀಲರ ನಡುವೆ ನಡೆದಿದ್ದ ಘರ್ಷಣೆ ಪ್ರಕರಣವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು 2020ರ ಫೆಬ್ರವರಿ 12ಕ್ಕೆ ಮುಂದೂಡಿದೆ.
ತೀಸ್ ಹಜಾರಿ ಕೋರ್ಟ್ ಸಮುಚ್ಛಯದಲ್ಲಿ ನಡೆದ ಘರ್ಷಣೆಯನ್ನು ಖಂಡಿಸಿ ದೆಹಲಿ ಪೊಲೀಸರು ನಡೆಸಿದ ಪ್ರತಿಭಟನೆ ವಿರುದ್ಧ ವಕೀಲರು ಸಲ್ಲಿಸಿದ್ದ ಅರ್ಜಿ ಕುರಿತು ದೆಹಲಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ.
ನಿಮ್ಮ ಘರ್ಷಣೆ ವಿವಾದದ ಬಗ್ಗೆ ಕಚೇರಿಯಲ್ಲಿಯೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಅದಕ್ಕಾಗಿಯೇ ಇಂತಹ ಅರ್ಜಿಗಳ ಮೊರೆ ಹೋಗಬೇಡಿ ಎಂದು ದೆಹಲಿ ಕೋರ್ಟ್ ಶುಕ್ರವಾರ ವಕೀಲರಿಗೆ ತಿಳಿಸಿದೆ.
ಘರ್ಷಣೆಯನ್ನು ಖಂಡಿಸಿ ದೆಹಲಿ ಪೊಲೀಸರು ತಮ್ಮ ಕುಟುಂಬದ ಸದಸ್ಯರೊಂದಿಗೆ ದೆಹಲಿ ಪೊಲೀಸ್ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲರು ಗುರುವಾರ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿರುವ ಹಲವು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.