Advertisement

Tirupati; ಹೆಚ್ಚುವರಿ 250 ಟನ್‌ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ!

01:39 AM Oct 08, 2024 | Team Udayavani |

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರೆಕೆ ತುಪ್ಪ ಬಳಸಲಾಗಿದೆ ಎಂಬ ವಿಚಾರ ದೇಶದಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ಇದೀಗ ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಫ್) ಮತ್ತೆ ಸುಮಾರು 250 ಟನ್‌ ಶುದ್ಧ ಹಸುವಿನ ತುಪ್ಪ ಪೂರೈಸುವಂತೆ ಕೋರಿದೆ. ಕೆಎಂಎಫ್ ಒಪ್ಪಿಗೆ ನೀಡಿದೆ.

Advertisement

ಈ ಹಿಂದೆ ತಿರುಪತಿ ಲಡ್ಡು ತಯಾರಿಗೆ ಕೆಎಂಎಫ್ ತುಪ್ಪವನ್ನೇ ಬಳಸಲಾಗುತ್ತಿತ್ತು. ಒಂದೆರಡು ವರ್ಷಗಳ ಹಿಂದೆ ಬೆಲೆ ಹೆಚ್ಚಳ ನೆಪವೊಡ್ಡಿ ಕೆಲವು ಖಾಸಗಿ ಹಾಲಿನ ಡೇರಿಗಳಿಂದ ತುಪ್ಪ ಖರೀದಿಸಲು ಆರಂಭಿಸಿತ್ತು. ಕೋಟ್ಯಂತರ ಭಕ್ತರ ನಂಬಿಕೆಯ ಬುನಾದಿಯನ್ನು ಅಲುಗಾಡಿಸಿರುವ ಕಹಿ ವಿವಾದದ ಅನಂತರ ಎಚ್ಚೆತ್ತುಕೊಂಡಿರುವ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಮತ್ತೆ ಕೆಎಂಎಫ್‌ನಿಂದ ಹೆಚ್ಚುವರಿ ತುಪ್ಪ ಖರೀದಿಸುವ ನಿರ್ಧಾರಕ್ಕೆ ಬಂದಿದೆ.
250 ಟನ್‌ ನಂದಿನಿ

ತುಪ್ಪ ಪೂರೈಕೆಗೆ ಸಿದ್ಧತೆ
ತಿರುಪತಿ ದೇವಸ್ಥಾನ ಆಡಳಿತ ಮತ್ತು ಕೆಎಂಎಫ್ ತುಪ್ಪ ಪೂರೈಕೆ ಸಂಬಂಧ ಒಡಬಂಡಿಕೆ ಮಾಡಿಕೊಂಡಿವೆ. ಕಳೆದ ಸೆಪ್ಟಂಬರ್‌ನಿಂದಲೇ 3 ತಿಂಗಳು 350 ಟನ್‌ ತುಪ್ಪ ಪೂರೈಸುವ‌ ಪ್ರಕ್ರಿಯೆ ಆರಂಭವಾಗಿದೆ. ಮತ್ತೆ ಹೆಚ್ಚುವರಿಯಾಗಿ 250 ಟನ್‌ ಹಸುವಿನ ತುಪ್ಪಕ್ಕೆ ಬೇಡಿಕೆ ಸಲ್ಲಿಸಿದೆ ಎಂದು ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ಹೇಳಿದ್ದಾರೆ.

7,500 ಟನ್‌ ದಾಸ್ತಾನು
ಕರ್ನಾಟಕ ಹಾಲು ಒಕ್ಕೂಟದಲ್ಲಿ ಸುಮಾರು 7,500 ಟನ್‌ ತುಪ್ಪ ದಾಸ್ತಾನು ಇದೆ. ಇದಲ್ಲದೆ 2,500 ಟನ್‌ ತುಪ್ಪವನ್ನು ಚಿಲ್ಲರೆ ಮತ್ತು ಇತರ ಉದ್ದೇಶಗಳಿಗಾಗಿ ಪೂರೈಸಲಾಗುತ್ತಿದೆ. ಭಕ್ತರಿಗೆ ಪ್ರಸಾದ ಮತ್ತು ಇತರ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಂದಿನಿ ತುಪ್ಪ ಬಳಕೆಯನ್ನು ರಾಜ್ಯ ಸರಕಾರವು ಕಡ್ಡಾಯಗೊಳಿಸಿದ ಅನಂತರ ಕೆಎಂಎಫ್ ತುಪ್ಪಕ್ಕೆ ಈಗ ರಾಜ್ಯವ್ಯಾಪಿ ಹಲವಾರು ಧಾರ್ಮಿಕ ಸಂಸ್ಥೆಗಳು ಮತ್ತು ದೇವಾಲಯಗಳಿಂದ ಬೇಡಿಕೆ ಬರುತ್ತಿದೆ ಎಂದು ಕೆಎಂಎಫ್ನ ಮಾರಾಟ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಎಂಎಫ್ ಈಗಾಗಲೇ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರೀ ದೇವಸ್ಥಾನ ಮತ್ತು ಇತರ ದೇವಸ್ಥಾನಗಳಿಗೆ ತುಪ್ಪವನ್ನು ಪೂರೈಸುತ್ತಿದೆ. ಟಿಟಿಡಿ ಪ್ರಸ್ತುತ ಕೆಎಂಎಫ್‌ ತುಪ್ಪವನ್ನು ಕೆಜಿಗೆ 475 ರೂ.ಗೆ ಖರೀದಿಸುತ್ತಿದೆ ಎಂದು ಹೇಳಿದ್ದಾರೆ.

ಟಿಟಿಡಿ ಹೆಚ್ಚುವರಿ ನಂದಿನಿ ತುಪ್ಪ ಖರೀದಿ ಮಾಡುವ ಸಂಬಂಧ ಬೇಡಿಕೆ ಸಲ್ಲಿಸಿದೆ. ಇತ್ತೀಚಿನ ಟೆಂಡರ್‌ನಂತೆ ಹೆಚ್ಚುವರಿ ತುಪ್ಪವನ್ನು ಪೂರೈಸಲಾಗುತ್ತದೆ.ಟಿಟಿಡಿಯ ಸೂಚನೆ ಬಂದಾಗ ಪೂರೈಸಲು ಸಿದ್ಧರಿದ್ದೇವೆ.
– ಎಂ.ಕೆ. ಜಗದೀಶ್‌, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ

Advertisement

 ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next