ತಿರುಪತಿ: ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ವಿಐಪಿ ದರ್ಶನಕ್ಕಾಗಿ 10,500 ರೂ. ಮೂಲ ಬೆಲೆಯ ಟಿಕೆಟ್‌ಗಳನ್ನು 65,000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಝಾಕಿಯಾ ಖಾನಮ್ ಮತ್ತು ಅವರ ಆಪ್ತ ಸಿಬಂದಿ ಹಾಗೂ ಇನ್ನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತಿರುಪತಿ ವೆಂಟೇಶ್ವರ ದೇಗುಲದ ಲಡ್ಡು ಪ್ರಸಾದ ತಯಾರಿಯಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ಮಾಡಲಾಗುತ್ತಿದೆ, ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಈ ಬೆಳವಣಿಗೆ ನಡೆದಿತ್ತು ಎಂಬ ಆರೋಪ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಅದರ ಬೆನ್ನಲ್ಲಿಯೇ ಹೊಸ ಪ್ರಕರಣ ಬೆಳಕಿಗೆ ಬಂದಿದೆ.
ತಿರುಪತಿಗೆ ಭೇಟಿ ನೀಡುವ ವ್ಯಕ್ತಿ “ವಿಐಪಿ’ ಎಂದು ಪರಿಗಣಿಸಲ್ಪಟ್ಟರೆ ದೇವರ ದರ್ಶನ ಟಿಕೆಟ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಜತೆಗೆ ದರ್ಶನದ ಟಿಕೆಟ್ ವೆಚ್ಚವನ್ನು 500 ರೂ.ಗೆ ಇಳಿಸಲಾಗುತ್ತದೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು ವಿಐಪಿ ದರ್ಶನ ಟಿಕೆಟ್ ನೀಡುವ ಪ್ರತೀ ತಿಂಗಳ ಕೋಟಾ ಹೊಂದಿರುತ್ತಾರೆ. ಜಗನ್ ರೆಡ್ಡಿ ಪಕ್ಷದ ಶಾಸಕಿ ತಮಗೆ ಇರುವ ಕೋಟಾವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಪಕ್ಷಕ್ಕೂ ನಮಗೂ ಸಂಬಂಧವಿಲ್ಲ
ಝಾಕಿಯಾ ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ. ಈ ವರ್ಷದ ಲೋಕಸಭೆ ಚುನಾವಣೆಗೆ ಮೊದಲೇ ಅವರು ಪಕ್ಷವನ್ನು ತ್ಯಜಿಸಿ ಟಿಡಿಪಿಗೆ ಸೇರ್ಪಡೆಯಾಗಿದ್ದರು ಎಂದು ಈ ಆರೋಪಗಳ ಬಗ್ಗೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಬೋತ್ಸ ಸತ್ಯನಾರಾಯಣ ಸ್ಪಷ್ಟನೆ ನೀಡಿದ್ದಾರೆ.