Advertisement

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

05:53 PM Jan 09, 2025 | Team Udayavani |

ತಿರುಪತಿ: ಕಾಲ್ತುಳಿತದಲ್ಲಿ ಆರು ಮಂದಿ ಭಕ್ತರು ಪ್ರಾಣ ಕಳೆದುಕೊಂಡ ಬಳಿಕ ತಿರುಪತಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಗುರುವಾರ(ಜ9) ಭೇಟಿ ನೀಡಿದರು.ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಟೋಕನ್ ವಿತರಣೆಗೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದೀರಿ ಎಂದು ಅಧಿಕಾರಿಗಳಿಗೆ ಛೀಮಾರಿ ಹಾಕಿದರು.

Advertisement

ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಸಚಿವರೊಂದಿಗೆ ಎರಡು ಪ್ರತ್ಯೇಕ ಕಾಲ್ತುಳಿತದ ಘಟನೆಗಳು ನಡೆದ ವಿಷ್ಣು ನಿವಾಸ ಮತ್ತು ಪದ್ಮಾವತಿ ಪಾರ್ಕ್‌ ಗೆ ತೆರಳಿ ಸಿಎಂ ನಾಯ್ಡು ಪರಿಶೀಲನೆ ನಡೆಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ನಿರೀಕ್ಷಿಸಲಾಗಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಏಕೆ ವಿಫಲರಾಗಿದ್ದೀರಿ ಎಂದು ಜಿಲ್ಲಾಧಿಕಾರಿ, ಟಿಟಿಡಿ ಕಾರ್ಯನಿರ್ವಹಣಾಧಿಕಾರಿ, ಜಂಟಿ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ವೈಕುಂಠ ದ್ವಾರ ದರ್ಶನಕ್ಕಾಗಿ ಟೋಕನ್ ವಿತರಣೆಗೆ ಟಿಟಿಡಿ ಮತ್ತು ಜಿಲ್ಲಾಡಳಿತ ಮಾಡಿರುವ ವ್ಯವಸ್ಥೆಗಳ ಬಗ್ಗೆ ವಿವರ ಪಡೆದರು. ಟೋಕನ್ ವಿತರಣೆಯನ್ನು ಸುಗಮವಾಗಿ ನಡೆಸಲು ನೀವು ತಂತ್ರಜ್ಞಾನವನ್ನು ಏಕೆ ಬಳಸಲಿಲ್ಲ ಮತ್ತು ಜನಸಂದಣಿ ನಿಯಂತ್ರಣಕ್ಕೆ ಇತರ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಟಿಟಿಡಿ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ ನೀಡಿದರು. ನಂತರ ಟಿಟಿಡಿ ನಡೆಸುತ್ತಿರುವ SVIMS ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿ ಕ್ಷೇಮ ವಿಚಾರಿಸಿದರು. ಎಲ್ಲರಿಗೂ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

Advertisement

ಕಾಲ್ತುಳಿತದಲ್ಲಿ ಒಟ್ಟು 48 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರನ್ನು ಎಸ್‌ವಿಆರ್ ರುಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಉಳಿದವರನ್ನು SVIMS ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪದ್ಮಾವತಿ ಪಾರ್ಕ್ ಮತ್ತು ವಿಷ್ಣು ನಿವಾಸದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಅಸಹಜ ಸಾ*ವುಗಳ ಪ್ರಕರಣಗಳನ್ನು ದಾಖಲಿಸಿದ್ದಾರೆ.

ತಿರುಪತಿ ಜಿಲ್ಲಾ ಉಸ್ತುವಾರಿ, ಕಂದಾಯ ಸಚಿವ ಅನಗಣಿ ಸತ್ಯ ಪ್ರಸಾದ್ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ SVIMS ಆಸ್ಪತ್ರೆಗೆ ಭೇಟಿ ನೀಡಿ ಮೃ*ತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ, ಧಾರ್ಮಿಕ ದತ್ತಿ ಸಚಿವ ಆನಂ ರಾಮನಾರಾಯಣ ರೆಡ್ಡಿ, ನೀರಾವರಿ ಸಚಿವ ನಿಮ್ಮಾ ರಾಮ ನಾಯ್ಡು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ.ಪಾರ್ಥ ಸಾರಥಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ವಿವರ
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರವರ ಊರುಗಳಿಗೆ ಕಳುಹಿಸಲಾಗುತ್ತಿದೆ. ಮೃ*ತ ದುರ್ದೈವಿಗಳು ಎಸ್. ಲಾವಣ್ಯ (38), ಕಂಡಿಪಲ್ಲಿ ಸಂತಿ (33), ಜಿ.ರಜಿನಿ (47) (ಮೂವರೂ ವಿಶಾಖಪಟ್ಟಣದವರು), ನರಸೀಪಟ್ಟಣದ ಬುಡ್ಡೆತಿ ನಾಯ್ಡು ಬಾಬು (55), ತಮಿಳುನಾಡಿನ ಮಲ್ಲಿಗಾ (50) ಮತ್ತು ಕೇರಳದ ವಿ. ನಿರ್ಮಲಾ (55) ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next