ತಿರುಪತಿ: ಅಪನಗದೀಕರಣದಿಂದಾಗಿ ತಿರುಪತಿ ತಿಮ್ಮಪ್ಪನ ಆದಾಯಕ್ಕೆ ಖೋತಾ ಆಯ್ತು. ಇದೀಗ ಲಡ್ಡುವಿನಲ್ಲೂ ಲಾಸ್ ಆಗ್ತಿದೆ ಅಂತ ಟಿಟಿಡಿ ಹೇಳುತ್ತಿದೆ. ಇದಕ್ಕೆ ಕಾರಣ ಉಚಿತವಾಗಿ ಮತ್ತು ಸಬ್ಸಿಡಿ ದರದಲ್ಲಿ ಲಡ್ಡು ನೀಡುತ್ತಿರುವುದಂತೆ!
ತಿರುಪತಿ ಎಂದರೆ ತಿಮ್ಮಪ್ಪನ ಜತೆಗೆ ಅಲ್ಲಿನ ಲಡ್ಡು ಕೂಡ ಅಷ್ಟೇ ಫೇಮಸ್. ಆದರೆ ಇದರಿಂದಾಗಿ ಆಡಳಿತ ಮಂಡಳಿ 140 ಕೋಟಿ ರೂ. ನಷ್ಟ ಅನುಭವಿಸಿದೆಯಂತೆ! ಸಬ್ಸಿಡಿ ದರದಲ್ಲಿ ಲಡ್ಡು ನೀಡಲಾಗುತ್ತಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಇಷ್ಟು ನಷ್ಟವಾಗಿದೆ ಎಂದು ದೇಗುಲ ಮೂಲಗಳು ಹೇಳಿವೆ.
ಕಳೆದ 11 ವರ್ಷಗಳಿಂದ ರುಚಿಕರವಾದ ಲಡ್ಡು ಪ್ರಸಾದವನ್ನು 25 ರೂ.ಗೆ ನೀಡಲಾಗುತ್ತಿದೆ. ಇದರ ನಿಜವಾದ ವೆಚ್ಚ 32.50 ರೂ. ಆಗಿದೆ. 2016 ಒಂದರಲ್ಲೇ ಸುಮಾರು 10 ಕೋಟಿ ಲಡ್ಡು ತಯಾರಿಸಲಾಗಿದ್ದು ಭಕ್ತಾದಿಗಳಿಗೆ ಹಂಚಲಾಗಿದೆ. ಶನಿವಾರವಷ್ಟೇ ನೋಟುಗಳ ಅಪನಗದೀಕರಣದಿಂದಾಗಿ ಟಿಟಿಡಿಗೆ ದಿನವಹಿ ಆದಾಯ 1 ಕೋಟಿ ರೂ.ಗಳಿಂದ 5 ಕೋಟಿ ರೂ. ವರೆಗೆ ಆದಾಯದಲ್ಲಿ ಖೋತವಾಗುತ್ತಿದೆ ಎಂಬ ವಿಚಾರ ಬಹಿರಂಗವಾಗಿತ್ತು.
ಇನ್ನು ಉಚಿತ ದರ್ಶನದಲ್ಲಿ ಗಂಟೆ ಗಟ್ಟಲೆ ನಿಂತವರಿಗೆ ತಿರುಪತಿ ದೇಗುಲ ಟ್ರಸ್ಟ್ (ಟಿಟಿಡಿ) ಒಂದು ಲಡ್ಡುಗೆ 10 ರೂ.ಗಳಂತೆ ನೀಡುತ್ತಿದೆ. ಇದರಿಂದಾಗಿ ಅತಿ ಹೆಚ್ಚು, 23 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ. ಜೊತೆಗೆ ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೂ ಒಂದು ಉಚಿತ ಲಡ್ಡು ನೀಡಲಾಗುತ್ತಿದೆ. ಇದರಿಂದ 22.7 ಕೋಟಿ ರೂ. ನಷ್ಟವಾಗಿದೆ. ಈ ಯೋಜನೆಯನ್ನು 2013ರಿಂದ ಆರಂಭಿಸಲಾಗಿತ್ತು. ಹಳೆಯ ಸಂಪ್ರದಾಯದಂತೆ ದೇಗುಲ ದರ್ಶನಕ್ಕೆ ಭಕ್ತಾದಿಗಳನ್ನು ಪ್ರೇರೇಪಿಸಲು ಹೀಗೆ ಮಾಡಲಾಗಿದೆ. ಅಂದಿನಿಂದ ಸುಮಾರು 70 ಲಕ್ಷ ಭಕ್ತಾದಿಗಳು ಪಾದಯಾತ್ರೆಯಲ್ಲಿ ಬೆಟ್ಟ ಏರಿ ದೇಗುಲ ದರ್ಶನ ಪಡೆದಿದ್ದಾರೆ. ಇವರೊಂದಿಗೆ 300 ರೂ. ವಿಶೇಷ ದರ್ಶನ ಟಿಕೆಟ್ ಮತ್ತು 500 ರೂ. ವಿಐಪಿ ದರ್ಶನ ಟಿಕೆಟ್ ಹೊಂದಿದವರಿಗೂ 2 ಲಡ್ಡು ಉಚಿತವಾಗಿ ನೀಡಲಾಗುತ್ತಿದೆ.
ಲಡ್ಡುವಿನಿಂದಾಗಿ ನಷ್ಟವಾಗುತ್ತಿದ್ದರೂ, ಸದ್ಯದ ಮಟ್ಟಿಗೆ ಲಡ್ಡು ಬೆಲೆ ಏರಿಸದೇ ಇರಲು ಚಿಂತಿಸಲಾಗಿದೆ. ಬದಲಿಗೆ ಉಚಿತ ಲಡ್ಡು ನೀಡಿಕೆ ಸ್ಥಗಿತಕ್ಕೆ ಮುಂದಾಗಬಹುದು ಎನ್ನಲಾಗಿದೆ. ಲಡ್ಡು ಪ್ರಸಾದ ನೀಡಿಕೆ ಬ್ರಿಟಿಷರ ಕಾಲದಲ್ಲಿ ಸುಮಾರು 100 ವರ್ಷಗಳ ಹಿಂದಿನಿಂದ ಆರಂಭಿಸಲಾಗಿದೆ.