Advertisement

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

05:31 PM Sep 22, 2024 | Team Udayavani |

ತಿರುಪತಿ: ತಿರುಮಲದಲ್ಲಿರುವ ಶ್ರೀವೆಂಕಟೇಶ್ವರ ದೇವಸ್ಥಾನದ ಭಕ್ತರ ಭಾವನೆಗಳನ್ನು ರಕ್ಷಿಸಲು ದೇಗುಲ ಆಡಳಿತ ಮಂಡಳಿ ಬದ್ಧವಾಗಿದೆ. ಲಡ್ಡು ಪ್ರಸಾದದ ಪಾವಿತ್ರ್ಯತೆಯನ್ನು ಪುನಃ ಸ್ಥಾಪಿಸಲಾಗಿದೆ. ಶ್ರೀವಾರಿ ಲಡ್ಡು ಪ್ರಸಾದ ಪರಿ ಶುದ್ಧವಾಗಿದೆ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಹೇಳಿದೆ.

Advertisement

ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬು ಪತ್ತೆಯಾದ ಬೆನ್ನಲ್ಲೇ ಭಕ್ತರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಟಿಟಿಡಿ ಟ್ವೀಟ್‌ ಮೂಲಕ ಪ್ರಸಾದದ ಪಾವಿತ್ರ್ಯತೆ ಪುನಃಸ್ಥಾಪನೆ ಖಾತರಿಪಡಿಸಿ, ಭಕ್ತರಲ್ಲಿ ಮೂಡಿರುವ ಆತಂಕ ಶಮನಗೊಳಿಸುವ ಪ್ರಯತ್ನ ನಡೆಸಿದೆ.

ಇದೇ ವಿಚಾರವಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೂಡ ಮಾತನಾಡಿ, ಲಡ್ಡುಗೆ ಸಂಬಂಧಿಸಿ ಮುಂದೆ ಏನು ಮಾಡಬೇಕು ಎಂದು ನಾವು ಚರ್ಚಿಸುತ್ತಿ ದ್ದೇವೆ. ಮಠಾಧೀಶರು, ಪುರೋಹಿತರು, ಸನಾತನ ಧರ್ಮದ ತಜ್ಞರೊಂದಿಗೆ ಚರ್ಚಿಸಿ ಸಲಹೆ ಪಡೆಯಲಾಗುವುದು. ಬಳಿಕ ಸಂಪ್ರೋಕ್ಷಣ ಹೇಗೆ ಮಾಡಬೇಕೆಂದು ನಿರ್ಧರಿಸಲಾಗುವುದು ಎಂದಿದ್ದಾರೆ. ಬಿಜೆಪಿ ನಾಯಕ ಎಲ್‌.ದಿನಕರ್‌ ಪ್ರತಿಕ್ರಿಯಿಸಿ, ಮಾಜಿ ಸಿಎಂ ಜಗನ್‌ ರೆಡ್ಡಿಯವರಿಗೆ ಹಿಂದೂ ಧಾರ್ಮಿಕ ನಂಬಿಕೆ, ಸಂಸ್ಕೃತಿಗಳ ಅರಿವಿಲ್ಲ. ಅವರಿಗೆ ಅದರ ಬಗ್ಗೆ ಲೇವಡಿ ಮಾಡಿ ಅಭ್ಯಾಸವಾಗಿದೆ ಎಂದಿದ್ದಾರೆ.

ಶೀಘ್ರವೇ ಕಲಬೆರಕೆ ಪತ್ತೆ ಯಂತ್ರ ಅಳವಡಿಕೆಗೆ ಟಿಟಿಡಿ ನಿರ್ಧಾರ
ತಿರುಪತಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾದ ವಿಷಯ ಭಾರೀ ವಿವಾದ ಸೃಷ್ಟಿಸಿರುವಂತೆಯೇ ದೇಗುಲದಲ್ಲಿ ಕಲಬೆರಕೆ ಪತ್ತೆ ಯಂತ್ರ ಅಳವಡಿಸಲು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ನಿರ್ಧರಿಸಿದೆ. ಈ ಡಿಸೆಂಬರ್‌ ಯಾ ಮುಂದಿನ ಜನವರಿ ಒಳಗೆ ವಿದೇಶದಿಂದ ಕಲಬೆರಕೆ ಪತ್ತೆ ಅಥವಾ ಗುಣಮಟ್ಟ ಪರೀಕ್ಷೆ ಯಂತ್ರವನ್ನು ತರಿಸಲಾಗುತ್ತದೆ ಎಂದು ದೇಗುಲ ಆಡಳಿತ ಮಂಡಳಿ ಹೇಳಿದೆ.

ಶನಿವಾರ ಮಾಧ್ಯಮವೊಂದರ ಜತೆಗೆ ಮಾತನಾಡಿ, ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)ಯು ದೇಗುಲಕ್ಕೆ ಈ ಯಂತ್ರವನ್ನು ಕೊಡುಗೆಯಾಗಿ ನೀಡಲಿದೆ. ವರ್ಷಾಂತ್ಯ ಅಥವಾ ಜನವರಿಯೊಳಗಾಗಿ ಹೊಸ ಯಂತ್ರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಅದನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದಿದ್ದಾರೆ. ಟಿಟಿಡಿ ವತಿಯಿಂದ ನೀಡಲಾಗುವ ಆಹಾರ ಮತ್ತು ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸುವ, ಪರಿಶುದ್ಧತೆಯನ್ನು ಖಾತ್ರಿಪಡಿಸುವ ಎಲ್ಲ ವ್ಯವಸ್ಥೆಯನ್ನೂ ಅದು ಒಳಗೊಂಡಿರಲಿದೆ ಎಂದು ಶ್ಯಾಮಲ ರಾವ್‌ ಹೇಳಿದ್ದಾರೆ.

Advertisement

ಈಗಿನ ಪ್ರಯೋಗಾಲಯದಲ್ಲಿಯೇ ಪರೀಕ್ಷೆ
ಸ್ವಂತ ಯಂತ್ರ ಅಳವಡಿಕೆ ಆಗುವವರೆಗೆ ಲಡ್ಡು ಮತ್ತು ಇತರ ಪ್ರಸಾದ ಮತ್ತು ಆಹಾರಗಳ ಗುಣಮಟ್ಟ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಅದನ್ನು ಈಗಿನ ಪ್ರಯೋಗಾಲಯದಲ್ಲಿಯೇ ನಡೆಸಲಾಗುತ್ತದೆ ಎಂದು ರಾವ್‌ ತಿಳಿಸಿದ್ದಾರೆ. ತುಪ್ಪವನ್ನು ಮೊದಲ ಹಂತದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಜತೆಗೆ ಲಡ್ಡು ತಯಾರಿಸಲು ಬೇಕಾಗುವ ಇತರ ವಸ್ತುಗಳ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತದೆ ಎಂದು ಹೇಳಿದರು.

ಅಮುಲ್‌ ಬಗ್ಗೆ ಸುಳ್ಳು ಆರೋಪ: 7 ಮಂದಿ ವಿರುದ್ಧ ಎಫ್ಐಆರ್‌
ಪ್ರಾಣಿ ಕೊಬ್ಬು ಬಳಕೆಯಾದ ತಿರುಪತಿ ಲಡ್ಡು ತಯಾರಿಕೆಗೆ ಅಮುಲ್‌ ತುಪ್ಪ ಬಳಕೆ ಮಾಡಲಾಗಿತ್ತು ಎಂದು ಕೆಲವು ಟ್ವಿಟರ್‌ ಹ್ಯಾಂಡಲ್‌ಗ‌ಳಲ್ಲಿ ಸುಳ್ಳು ಸುದ್ದಿ ಬಿತ್ತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಮುಲ್‌ ದೂರು ನೀಡಿದ್ದು, 7 ಟ್ವಿಟರ್‌ ಹ್ಯಾಂಡಲ್‌ಗ‌ಳ ವಿರುದ್ಧ ಕೇಸು ದಾಖಲಿಸಲಾಗಿ ದೆ.

ಪವನ್‌ಗೆ ಪ್ರಕಾಶ್‌ ರೈ ತಿರುಗೇಟು
ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿ ನಡೆದಿರುವ ಪ್ರಾದೇಶಿಕ ಸಮಸ್ಯೆಯನ್ನು ರಾಷ್ಟ್ರದ ಸಮಸ್ಯೆಯೆಂಬಂತೆ ಬಿಂಬಿಸಬೇಡಿ. ಅದರ ಬದಲು ಸೂಕ್ತ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಿ ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ. ಈ ಮೂಲಕ ಧರ್ಮ ರಕ್ಷಣ ಮಂಡಳಿ ಸ್ಥಾಪನೆ ಕೋರಿದ್ದ ಪವನ್‌ ಕಲ್ಯಾಣ್‌ಗೆ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next