ತಿರುಪತಿ: 14 ಮಂದಿ ಅರ್ಚಕರೂ ಸೇರಿದಂತೆ ದೇವಾಲಯದ 140 ಉದ್ಯೋಗಿಗಳಿಗೆ ಈವರೆಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಕೆಲವು ವಾರಗಳವರೆಗೆ ತಿರುಪತಿ ತಿಮ್ಮಪ್ಪನ ದೇವಾಲಯದ ಬಾಗಿಲನ್ನು ಮುಚ್ಚಲು ಟಿಟಿಡಿ ಚಿಂತನೆ ನಡೆಸುತ್ತಿದೆ.
ಜೂನ್ 11ರಿಂದ ದೇವಾಲಯದ ಬಾಗಿಲನ್ನು ತೆರೆದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು.
ಪ್ರತಿದಿನ 12 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಗುತ್ತಿತ್ತು. ಈ ಮಧ್ಯೆ, ದೇವಾಲಯದ 140 ಉದ್ಯೋಗಿಗಳು ಈವರೆಗೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ದೇವಾಲಯದ ಉದ್ಯೋಗಿಗಳ ಹಿತದೃಷ್ಟಿಯಿಂದ ದೇವರ ದರ್ಶನ ಸ್ಥಗಿತಗೊಳಿಸಲು ಎಲ್ಲೆಡೆಯಿಂದ ಒತ್ತಡ ಬರುತ್ತಿದೆ.
ಜತೆಗೆ ತಿರುಮಲ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯವರು ಶನಿವಾರ ಈ ಸಂಬಂಧ ಟಿಟಿಡಿಗೆ ಪತ್ರ ಬರೆದು, ಭಕ್ತರಿಗೆ ದರ್ಶನ ಸ್ಥಗಿತಗೊಳಿಸಿ. ಇದು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಕಂಟೈನ್‌ಮೆಂಟ್ ವಲಯ ಅಥವಾ ಅತೀ ಹೆಚ್ಚು ಸೋಂಕಿಗೆ ಒಳಗಾದ ರಾಜ್ಯಗಳಿಂದ ಬರುವ ಭಕ್ತರಿಗೆ ಪ್ರವೇಶ ನಿಷೇಧಿಸಿ. ಜತೆಗೆ ಪ್ರತೀ ಗಂಟೆಗೆ 250 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಟಾರೆಡ್ಡಿ, ಭಕ್ತರಿಗೆ ದೇವಾಲಯದ ಬಾಗಿಲನ್ನು ಮುಚ್ಚಬೇಕೇ, ಬೇಡವೇ? ಎಂಬುದರ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಮಧ್ಯೆ, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಜತೆ ಸಮಾಲೋಚನೆ ನಡೆಸಿದ ಅನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.