Advertisement

ರಾಮದುರ್ಗದ ತಿರುಮಲ ಹೋಟೆಲ್‌

06:00 AM Dec 24, 2018 | |

ಬೆಳಗಾವಿಯ ರಾಮದುರ್ಗ ನಗರ, ಪ್ರವಾಸಿ ತಾಣಗಳ ಕೊಂಡಿ. ಇಲ್ಲಿಗೆ ಬಂದರೆ ತಿರುಮಲ ಹೋಟೆಲ್‌ಗೆ ಭೇಟಿ ಕೊಡುವುದನ್ನು ಮರೆಯ ಬೇಡಿ.  ಇಲ್ಲಿ ಸಿಗುವ ಟೀ, ಕಾಫಿ ಮತ್ತು ಕಷಾಯ ವಿಭಿನ್ನವಾಗಿರುತ್ತದೆ. ಗಾಜಿನ ಲೋಟದಲ್ಲಿ ತಂದಿಡುವ ಬಿಸಿ ಬಿಸಿ ಶುಂಠಿ ಚಹಾ ಸೇವಿಸುವುದೇ ಒಂದು ಮಜಾ ಅನುಭವ.

Advertisement

ಇಲ್ಲಿ ಬೆಳಗಿನ ಉಪಹಾರಕ್ಕೆ ಮಾಡುವ ಶಿರಾ( ಕೇಸರಿಬಾತ್‌) ರುಚಿಯೋ ರುಚಿ. ಶುದ್ಧ ನಂದಿನಿ ತುಪ್ಪದಲ್ಲಿ ಮಾಡಿದ ಕೇಸರಿ ಬಣ್ಣದ ಶಿರಾವನ್ನು ಬಾಯಲ್ಲಿಟ್ಟರೆ ಕರಗಿ, ನೀರಾಗಿ ಗಂಟಲಲ್ಲಿ ಇಳಿದದ್ದೇ ಗೊತ್ತಾಗುವುದಿಲ್ಲ.  ಮಧ್ಯೆ, ಮಧ್ಯೆ ಸಿಗುವ ಗೋಡಂಬಿ, ದ್ರಾಕ್ಷಿ$ ಈ ತಿಂಡಿಯ ಸವಿಯನ್ನು ದುಪ್ಪಟ್ಟು ಮಾಡುತ್ತದೆ. ಇನ್ನು ಇಡ್ಲಿ ಸಾಂಬಾರಿನ ರುಚಿ ಇನ್ನೊಂದು ರೀತಿಯದ್ದು. ವಡೆಯನ್ನು ಟೊಮೆಟೊ ರಸಂ ಜೊತೆ ಮುಳುಗಿಸಿ ಸವಿದರೇ ಮುಗೀತು. ಕೆಂಪಗೆ ಹದವಾದ ಗರಿ ಗರಿ ಮಸಾಲಾ ದೋಸೆಯನ್ನು ಮುರಿದು ಬಟಾಟೆ ಪಲ್ಯ, ಕಾಯಿ ಚಟ್ನಿಯನ್ನು ಅದರೊಳಗೆ ಸೇರಿಸಿ ಬಾಯಲ್ಲಿಟ್ಟರೇ ಆಹಾ.  ಇದರ ಜೊತೆ ಫ್ರೆಶ್‌ ಕೊಬ್ಬರಿ ತುರಿಯ ಉಪಿಟ್ಟು, ಶಾವಿಗೆ ಬಾತ್‌, ಬನ್ಸ್‌ ಹಾಗೂ ಪುರಿ ತುಂಬಾ ರುಚಿಕರವಾಗಿವೆ.

ಮಧ್ಯಾಹ್ನದ ಲಂಚ್‌ ಹಾಗೂ ಸೌತ್‌ಇಂಡಿಯನ್‌ ಥಾಲಿ ಎರಡಕ್ಕೂ ತಿರುಮಲ ಹೋಟೆಲ್‌ ಪ್ರಸಿದ್ಧ. ಎರಡರ ದರವೂ ತಲಾ ರೂ.60/- ಮಾತ್ರ. ತಂದೂರಿ ರೋಟಿ, ಚಪಾತಿ, ದಾಲ್‌ ಎರಡು ಪಲ್ಯ, ಮೊಸರನ್ನ, ಒಂದು ಸಿಹಿ, ಕರಿದ ಮೆಣಸಿನಕಾಯಿ, ಹಪ್ಪಳ ಎಲ್ಲವೂ ಸಿಗುತ್ತದೆ.  ಇದು ಹಿತಮಿತವಾದ ಊಟ. ಅಲ್ಲದೇ, ಹಾಸನದಿಂದ ರಾಗಿ ಹಿಟ್ಟನ್ನು ಆಮದು ಮಾಡಿಕೊಂಡು, ಪ್ರತಿ ಮಂಗಳವಾರ ಹಾಗೂ ಬುಧವಾರ ಗ್ರಾಹಕರಿಗಾಗಿ ರಾಗಿ ಮುದ್ದೆ, ಸೊಪ್ಪಿನ ಸಾರವನ್ನೂ ಉಣಬಡಿಸುತ್ತಾರೆ. ಇದರ ಬೆಲೆ ಕೇವಲ 40 ರೂ. ಮಾತ್ರ.

ಸಂಜೆ 4 ರಿಂದ ರುಚಿಕರವಾದ ಸ್ನ್ಯಾಕ್ಸ್‌ ತಯಾರಿ ಪ್ರಾರಂಭವಾಗುತ್ತದೆ. 
ಇಲ್ಲಿ ಸಿಗುವ ಪಕೋಡದ ಘಮಲು ಬಾಯಲ್ಲಿ ನೀರು ತರಿಸುತ್ತದೆ.  ಕಾಂದಾ ಭಜ್ಜಿ, ಆಲೂ ಪಕೋಡಾ, ರಿಂಗ್‌ ಅನಿಯನ್‌ ಪಕೋಡಾ, ಗೋಬಿ ಮಂಚೂರಿ, ಸಾಯಿ ಡ್ರೆ„, ಫಿಂಗರ್‌ ಚಿಪ್ಸ್‌ ಹಾಗೂ ಚೈನಿಸ್‌ ಫ‌ುಡ್‌ಗಳಿಗೆ ಈ ಹೋಟೆಲ್‌ ತುಂಬಾ ಹೆಸರುವಾಸಿ. 

ಈ ಹೋಟೆಲ್‌ನ ಹೆಗ್ಗಳಿಕೆ ಏನೆಂದರೆ, ಬೆಳಗಿನ ಇಡ್ಲಿ ವಡೆಯಿಂದ, ರಾತ್ರಿಯ ಚಾಟ್ಸ್‌ ತನಕ  ಎಲ್ಲ ಬಗೆಯ ತಿನಿಸುಗಳಲ್ಲೂ ಒಂದೇ ರುಚಿ. ಇದರಲ್ಲಿ ಯಾವುದೇ ಬದಲಾವಣೆ ಕಾಣದೇ ಇರುವುದು.  ತಿರುಮಲ ಹೋಟೆಲ್‌ನಲ್ಲಿ ರಶ್‌ನದ್ದೇ ಸಮಸ್ಯೆ. ಅದರಲ್ಲೂ ಶನಿವಾರ, ಭಾನುವಾರ ಕಾಲಿಡಲೂ ಕಷ್ಟ ಎಂಬ ಮಟ್ಟಿಗೆ ಈ ಹೋಟೆಲ್‌ ಭರ್ತಿಯಾಗಿರುತ್ತದೆ. 

Advertisement

ಇದರ ಪಾಲುದಾರರು ವಿಜಯ ಶೆಟ್ಟಿ ಹಾಗೂ ವೀರೇಂದ್ರ ಶೆಟ್ಟಿ ಸಹೋದರರು.  ಮೂಲತಃ ಕುಂದಾಪುರದವರು. ನಮ್ಮ ಹೊಟೇಲ್‌ನ ತಿನಿಸುಗಳ ತಯಾರಿಕೆಗೆ ಬಳಸುವ  ಅಡುಗೆ ಎಣ್ಣೆ, ತರಕಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅಡುಗೆ ಕೋಣೆಯ ಶುಚಿತ್ವಕ್ಕೆ ಗಮನ ನೀಡಿದ್ದೇವೆ ಎನ್ನುತ್ತಾರೆ ಈ ಸಹೋದರರು. 

ಶುಚಿ-ರುಚಿಯಿಂದಾಗಿ ರಾಯದುರ್ಗಕ್ಕೆ ಯಾರೇ ವಿಐಪಿಗಳು ಭೇಟಿಕೊಟ್ಟರೂ ತಿರುಮಲ ಹೋಟೆಲ್‌ನ ಊಟ ತುಂಡಿಯ ರುಚಿ ನೋಡದೆ ಹೋಗುವುದಿಲ್ಲ. ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಾಹಿತಿಗಳು, ನಟ-ನಟಿಯರೂ ಈ ಹೋಟೆಲ್‌ನ ರುಚಿಯನ್ನು ಸವಿದಿದ್ದಾರೆ.   

– ಸುರೇಶ ಗುದಗನ‌ವರ

Advertisement

Udayavani is now on Telegram. Click here to join our channel and stay updated with the latest news.

Next