ಹೈದರಾಬಾದ್ : ತಿರುಪತಿ ತಿರುಮಲ ದೇಗುಲ (ಟಿಟಿಡಿ) ಆಡಳಿತ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ವೆಂಕಟೇಶ್ವರ ದೇಗುಲದ ಮುಖ್ಯ ಅರ್ಚಕ ಎ.ವಿ.ರಮಣ ದೀಕ್ಷಿತುಲು ಅವರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಹೊಸತಾಗಿ ಆಯ್ಕೆಯಾಗಿರುವ ದೇಗುಲದ ಆಡಳಿತ ಮಂಡಳಿ ಬುಧವಾರ ತಿರುಪತಿಯಲ್ಲಿ ಸಭೆ ಸೇರಿ 65 ವರ್ಷಕ್ಕಿಂತ ಹೆಚ್ಚಿನ ವಯೋಮಿತಿ ಇರುವವರು ದೇಗುಲ ಸೇವೆಯಿಂದ ಹೊರಗುಳಿಯುವುದು ಉತ್ತಮ ಎಂಬ ನಿಯಮ ಜಾರಿಗೆ ತರಲು ಸರ್ವಾನುಮತದಿಂದ ನಿರ್ಧರಿಸಿತು. ಇದರಿಂದಾಗಿ ಹಾಲಿ ಮುಖ್ಯ ಅರ್ಚಕ ದೀಕ್ಷಿತುಲು ಜತೆಗೆ ಅರ್ಚಕರಾದ ನರಸಿಂಹ ದೀಕ್ಷಿತುಲು, ಶ್ರೀನಿವಾಸಮೂರ್ತಿ ದೀಕ್ಷಿತುಲು ಮತ್ತು ನಾರಾಯಣ ದೀಕ್ಷಿತುಲು ನಿವೃತ್ತಿಯಾಗಿದ್ದಾರೆ. ಮಂಗಳವಾರ ಚೆನ್ನೈಯಲ್ಲಿ ಮಾತನಾಡಿದ್ದ ರಮಣ ದೀಕ್ಷಿತುಲು ಟಿಟಿಡಿ ಆಡಳಿತ ಮಂಡಳಿ ಸಾಂಪ್ರದಾಯಿಕ ವಿಧಾನಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದರು.