ತಿರುಪತಿ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿ ತಿರುಮಲ ದೇವಸ್ಥಾನದ ನಿಧಿಯಿಂದ ಸುಮಾರು 100 ಕೋಟಿ ರೂ. ಬೇರೆಡೆಗೆ ವರ್ಗಾಯಿಸಿ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ದೇವಳದ ಮುಖ್ಯ ಅರ್ಚಕ ಎ ವಿ ರಮಣ ದೀಕ್ಷಿತುಲು ಅವರನ್ನು ಹುದ್ದೆಯಿಂದ ಕಿತ್ತು ಹಾಕಿರುವುದು ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ.
ತಿರುಮಲ ತಿರುಪತಿ ವಿಶ್ವಸ್ಥ ಮಂಡಳಿಯು ಕಳೆದ ಬುಧವಾರ ‘ದೇವಳದ ವಂಶಪಾರಂಪರ್ಯದ ಎಲ್ಲ ಅರ್ಚಕರು 65 ವರ್ಷ ಪ್ರಾಯ ತಲುಪಿದೊಡನೆಯೇ ನಿವೃತ್ತರಾಗಬೇಕು’ ಎಂಬ ಠರಾವನ್ನು ಕೈಗೊಂಡ ಕೆಲವೇ ದಿನಗಳಲ್ಲಿ ದೀಕ್ಷಿತುಲು ಅವರು ತಮ್ಮ ಮುಖ್ಯ ಅರ್ಚಕ ಹುದ್ದೆಯನ್ನು ಕಳೆದುಕೊಂಡಿದ್ದಾರೆ ಎಂದು ಟಿಟಿಡಿ ಹೇಳಿದೆ.
ದೀಕ್ಷಿತುಲು ಅವರ ಸ್ಥಾನಕ್ಕೆ ಟಿಟಿಡಿ ಇದೀಗ ವೇಣುಗೋಪಾಲ ದೀಕ್ಷಿತುಲು ಅವರನ್ನು ತಿರುಮಲದ ವೆಂಕಟೇಶ್ವರ ದೇವಸ್ಥಾನದ ಮುಖ್ಯ ಅರ್ಚಕರನ್ನಾಗಿ ನೇಮಿಸಿದೆ.
ಸಾವಿರಾರು ವರ್ಷಗಳಿಂದ ತಯಾರಿಸಲಾಗುತ್ತಿರುವ ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದ ಜಗತ್ ಪ್ರಸಿದ್ಧವಾಗಿದೆ. ಅದನ್ನು ತಯಾರಿಸುವ ಅಡುಗೆ ಮನೆಯನ್ನು ಈಚೆಗೆ ಕೆಡಹಿ ಅದರ ಕೆಳಭಾಗದಲ್ಲಿ ಜೋಪಾನವಾಗಿ ಶೇಖರಿಸಿಡಲಾಗಿದ್ದ ಅತ್ಯಂತ ಪುರಾತನ ಹಾಗೂ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ಸರಕಾರ ತೆಗೆದುಕೊಂಡು ಹೋಗಿದೆ ಎಂದು ರಮಣ ದೀಕ್ಷಿತುಲು ಆರೋಪಿಸಿದ್ದರು.
ಆಂಧ್ರಪ್ರದೇಶದ ತಿರುಪತಿ ತಿರುಮಲದಲ್ಲಿನ ವೆಂಕಟೇಶ್ವರ ದೇವಸ್ಥಾನ ಮಾತ್ರವಲ್ಲದೆ ತಿರುಪತಿಯಲ್ಲಿನ ಇತರ ಹಾಗೂ ವಿಶ್ವಾದ್ಯಂತದ ವೆಂಕಟೇಶ್ವರ ದೇವಾಲಯಗಳನ್ನು ಟಿಟಿಡಿ ನಡೆಸುತ್ತಿದೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿನ ಎಲ್ಲ ಆಭರಣಗಳ ಸುರಕ್ಷೆಗಾಗಿ ಅವುಗಳ 3ಡಿ ಚಿತ್ರಗಳ ಕಡತವನ್ನು ರೂಪಿಸಲು ತಾನು ನಿರ್ಧರಿಸಿರುವುದಾಗಿ ಟಿಟಿಡಿ ಹೇಳಿಕೊಂಡಿದೆ. ಮಾತ್ರವಲ್ಲದೆ ದೇವಳದಲ್ಲಿನ ಆಗಮ ಶಾಸ್ತ್ರ ಪಂಡಿತರು ಒಪ್ಪಿದಲ್ಲಿ ದೇವಸ್ಥಾನದ ಸುಪ್ರಭಾತ, ತೋಮಲ ಸಹಿತ ಇತರ ಎಲ್ಲ ಎಲ್ಲ ಪೂಜಾ ಕೈಂಕರ್ಯಗಳ ನೇರ ಟಿವಿ ಪ್ರಸಾರ ಕೈಗೊಳ್ಳಲು ತಾನು ಬಯಸಿರುವುದಾಗಿ ಟಿಟಿಡಿ ಹೇಳಿದೆ.