Advertisement

ಭೂ ಕುಸಿತದ ಜಾಗ್ರತೆ ಅಗತ್ಯ

01:19 PM Jul 09, 2020 | Naveen |

ತೀರ್ಥಹಳ್ಳಿ: ಹೆಗಲತ್ತಿಯಲ್ಲಿ ನಡೆದ ಭೂ ಕುಸಿತದಂತೆಯೇ ಇನ್ನಷ್ಟು ಭೂಮಿ ಕುಸಿಯುವ ಸಾಧ್ಯತೆ ಇರುವ ಕಾರಣ ಈ ಭಾಗದ ಜನರು ಈ ಬಗ್ಗೆ ಸದಾ ಜಾಗ್ರತೆ ವಹಿಸಬೇಕಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಹಾಗೂ ಭೂ ಕುಸಿತ ಅಧ್ಯಯನ ಸಮಿತಿ ಮುಖ್ಯಸ್ಥ ಅನಂತ ಹೆಗಡೆ ಆಶೀಸರ ಹೇಳಿದರು.

Advertisement

ಅರಳಾಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದ ಸ.ನಂ. 46 ರಲ್ಲಿರುವ ಗೇರು ನೆಡುತೋಪಿನಲ್ಲಿ ಗೇರು ಅಭಿವೃದ್ಧಿ ನಿಗಮದವರು ಸಹಜ ಅರಣ್ಯವನ್ನು ನಾಶಪಡಿಸುತ್ತಿದ್ದಾರೆ ಎಂಬ ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೆಚ್ಚು ಮಳೆ ಬೀಳುವ ಕಾರಣ ಹೆಗಲತ್ತಿಯಂತಹ ಪ್ರಕರಣಗಳು ಈ ಭಾಗದಲ್ಲಿ ಆಗಾಗ ಮರುಕಳಿಸುವ ಸಂಭವವಿದೆ. ಆದ್ದರಿಂದ ಜನರ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಈ ಸಲುವಾಗಿ ಎಲ್ಲ ರೀತಿಯ ಮುಂಜಾಗ್ರತೆ ವಹಿಸುವಂತೆ ತಾಲೂಕಿನ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಕೂಡ ಹೇಳಿದ್ದೇನೆ ಎಂದರು.

ಹೆಗಲತ್ತಿ ಸೇರಿದಂತೆ ಭೂ ಕುಸಿತದ ಪ್ರಕರಣದ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಒಂದು ತಿಂಗಳ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ತಜ್ಞರ ಸಮಿತಿಯಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಸರ್ವೆ ಆಫ್‌ ಇಂಡಿಯಾ, ಬಾಟನಿ ಹಾಗೂ ಇಸ್ರೋ ಸಂಸ್ಥೆಯ ವಿಜ್ಞಾನಿಗಳಿದ್ದಾರೆ. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಿ ತಾವು ಪರಿಶೀಲನೆ ನಡೆಸಿರುವುದಾಗಿಯೂ ತಿಳಿಸಿದರು. ಗೇರು ಇಳುವರಿ ಕಡಿಮೆ ಇರುವ ಕಾರಣ ಗಿಡಗಳಿಗೆ ಗೊಬ್ಬರ ಕೊಡುವ ಸಲುವಾಗಿ ನಿಗಮದ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ಗೇರು ಗಿಡಗಳ ಬುಡದಲ್ಲಿರುವ ಗಿಡಮರಗಳನ್ನು ಸವರಿ ಮಳೆ ನೀರು ನಿಲ್ಲುವಂತೆ ಇಂಗು ಗುಂಡಿಯನ್ನು ನಿರ್ಮಿಸಲಾಗುತ್ತಿದೆ ಎಂದು ನಿಗಮದ ಅಧಿಕಾರಿ ಎಸ್‌.ಜೆ. ಸಜೇಶ್‌ ತಿಳಿಸಿದರು.

ಎಸಿಎಫ್‌ ಸತೀಶ ಚಂದ್ರ, ಆರ್‌ ಎಫ್‌ಒ ಲೋಕೇಶ್‌, ಪರಿಸರವಾದಿ ಕಲ್ಲಹಳ್ಳ ಶ್ರೀಧರ್‌, ಅರಳಾಪುರ ಗ್ರಾಪಂ ಸದಸ್ಯರಾದ ಗಂಗಾಧರ್‌, ಚಂದ್ರಶೇಖರ ಹೆಗ್ಡೆ, ಭಾಗೀರಥಿ, ಹರ್ಷ, ಯಡಗುಡ್ಡೆ ದೇವದಾಸ್‌, ಶ್ರೀವತ್ಸಾ, ನಾಗರಾಜ ಅಡಿಗ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next