Advertisement

ಪೌರತ್ವ ಕಾಯ್ದೆ ಜನಹಿತದ್ದು: ಆರಗ

03:38 PM Jan 15, 2020 | Naveen |

ತೀರ್ಥಹಳ್ಳಿ: ಪೌರತ್ವ ಕಾಯ್ದೆ ತಿದ್ದುಪಡಿಯೂ ಸೇರಿದಂತೆ ಭಾರತೀಯ ಜನತಾ ಪಕ್ಷ ಜನತೆಗೆ ನೀಡಿದ ಆಶ್ವಾಸನೆಯನ್ನು ಜಾರಿಗೆ ತರುವ ಬದ್ಧತೆ ತೋರಿದೆಯೇ ಹೊರತು ಇದರಲ್ಲಿ ಯಾವುದೇ ಹಿಡನ್‌ ಅಜೆಂಡಾ ಇಲ್ಲಾ. ದೇಶದ ಏಕತೆಯ ವಿಚಾರದಲ್ಲಾದರೂ ಎಡಪಂಥೀಯ ನಿಲುವಿನ ಪಕ್ಷಗಳು ಹೊಣೆಗಾರಿಕೆಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕಾಯ್ದೆಗಳ ಪರ ತಾಲೂಕು ಬಿಜೆಪಿ ವತಿಯಿಂದ ತಾಲೂಕು ಕಚೇರಿ ಎದುರು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜನಸಂಘದ ಕಾಲದಿಂದಲೂ ನಾವು ಪೌರತ್ವ ಕಾಯ್ದೆ ತಿದ್ದುಪಡಿ, 370 ರದ್ದತಿ, ರಾಮಮಂದಿರ ಸಮಸ್ಯೆ ಮುಂತಾದ ವಿಚಾರಗಳ ಬಗ್ಗೆ ಜನತೆಗೆ ಆಶ್ವಾಸನೆ ನೀಡುತ್ತಾ ಬಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಾಧನೆ ನಡೆದಿದೆ ಎಂದು ಹೇಳಿದರು.

ಈ ಆಶ್ವಾಸನೆಗಳನ್ನು ನೀಡುವ ಸಂದರ್ಭ ನಮಗೆ ಅಧಿಕಾರ ಇರಲಿಲ್ಲ. ಈಗ ನಮಗೆ ಆ ಮಾತುಗಳನ್ನು ಉಳಿಸಿಕೊಳ್ಳುವ ಶಕ್ತಿ ಬಂದಿದೆ. ಅದರಂತೆ ಕೆಲವು ಕಾಯ್ದೆಗಳು ಜಾರಿಯಾಗಿವೆ. ದೇಶದ ಜನತೆಗೆ ಈ ಮೊದಲು ನೀಡಿರುವ ಭರವಸೆಯಂತೆ ಇನ್ನೂ ಮಹತ್ವದ ಐದಾರು ಕಾಯ್ದೆಗಳು ಜಾರಿಗೆ ತರುವುದು ಬಾಕಿ ಇದ್ದು ಇವುಗಳನ್ನು ಈಡೇರಿಸಬೇಕಿದೆ. ಮುಸ್ಲಿಂ ಸಮುದಾಯದವರ ಜೊತೆ ಕೂಡ ಈ ಬಗ್ಗೆ ನೇರ ಸಂವಾದ ಮಾಡುವುದಾಗಿಯೂ ತಿಳಿಸಿದರು.

ಕಳೆದ ಆರು ವರ್ಷಗಳಿಂದ ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಅವಕಾಶವಾದಿ ಕಾಂಗ್ರೆಸ್‌ ಹತಾಶವಾಗಿದ್ದು ಪೌರತ್ವ ಕಾಯ್ದೆ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿ ಮುಸ್ಲಿಂ ಸಮುದಾಯವನ್ನು ಬೀದಿಗೆಳೆಯುವ ಪ್ರಯತ್ನ ಮಾಡುತ್ತಿದೆ. ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನದಲ್ಲಿರುವ ಹಿಂದೂಗಳಿಗೆ ಆಶ್ರಯ ಕಲ್ಪಿಸುವ ಸದುದ್ದೇಶದ ಈ ಕಾಯ್ದೆಯಲ್ಲಿ ಮೂಲ ನಿವಾಸಿಗಳಿಗೆ ಇರುವ ತೊಂದರೆಯಾದರೂ ಏನು ಎಂಬುದನ್ನು ಕಾಂಗ್ರೆಸ್‌ ಹಾಗೂ ಎಡಪಂಥೀಯ ಚಿಂತನೆಯವರು ಸ್ಪಷ್ಟಪಡಿಸಬೇಕು ಎಂದೂ ಸವಾಲೆಸೆದರು.

ಮುಸ್ಲಿಂ ಸಮುದಾಯದವರನ್ನು ರಾಷ್ಟ್ರಪತಿಯಿಂದ ನಗರ ಸಭೆಯ ಅದ್ಯಕ್ಷತೆವರೆಗೆ ಅಧಿಕಾರದಲ್ಲಿ ಕೂರಿಸಿರುವ ಬಿಜೆಪಿಗೆ ಅಸಹಿಷ್ಣುತೆ ಎಂಬುದಿಲ್ಲ. ಆದರೆ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿರುವ ಕಾಂಗ್ರೆಸ್‌ ಮುಸ್ಲಿಮರನ್ನು ದಡ್ಡರನ್ನಾಗಿ ಇಟ್ಟಿದ್ದೇ ಆ ಪಕ್ಷದ ಸಾಧನೆಯಾಗಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಸೇರಿದಂತೆ ಕೋಮುವಾದಿಗಳನ್ನು ಎತ್ತಿಕಟ್ಟುತ್ತಿರುವ ಎಡಪಂಥೀಯ ವಿಚಾರವಾದಿಗಳಿಗೆ ಈ ಕುರಿತು ನಾಚಿಕೆಯಾಗಬೇಕು. ತನಗೆ ಎಷ್ಟು ಮಕ್ಕಳಿದ್ದಾರೆ ಎಂದೇ ತಿಳಿದಿಲ್ಲಾ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂರಂತೂ ಓರ್ವ ಜೋಕರ್‌ ಎಂದೂ ಟೀಕಿಸಿದರು.

Advertisement

ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಮಾತನಾಡಿ, ಈ ಕಾಯ್ದೆಯ ಪರ 70 ವರ್ಷದ ಹಿಂದೆ ತಾನು ತೆಗೆದುಕೊಂಡಿದ್ದ ನಿರ್ಣಯಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ಬದುಕಲು ಸಾಧ್ಯವಾಗದ ಮತ್ತು ಭಾರತದ ಹಿಂದಿನ ಭಾಗವಾಗಿದ್ದ ಪ್ರದೇಶದ ನಿವಾಸಿಗಳಿಗೆ ಪೌರತ್ವ ನೀಡಲು ಈ ಕಾಯ್ದೆ ಸಹಕಾರಿಯಾಗಿದೆ. ಗಾಂಧಿ, ಅಂಬೇಡ್ಕರ್‌ ಕೂಡ ಇದನ್ನು ಹೇಳಿದ್ದರು. ಕಾಂಗ್ರೆಸ್ಸಿನ ಸುಳ್ಳನ್ನು ಜನತೆ ಆರ್ಥೈಸಿಕೊಳ್ಳಬೇಕು ಎಂದರು.

ಇಲ್ಲಿಯೇ ಹುಟ್ಟಿರುವ ಮುಸ್ಲಿಮರು ಮತ್ತು ಹಿಂದೂಗಳು ಒಂದು ತಾಯಿಯ ಮಕ್ಕಳಿದ್ದಂತೆ. ಧರ್ಮದ ಆಧಾರದಲ್ಲಿ ಈ ದೇಶವನ್ನು ಒಡೆದ ಕಾಂಗ್ರೆಸ್‌ ಮತ್ತೆ ಅದೇ ಪ್ರಯತ್ನವನ್ನು ಮುಂದುವರಿಸಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂರ ಭವಿಷ್ಯ ನುಡಿಯಂತೆ 2020 ರಲ್ಲಿ ವಿಶ್ವಕ್ಕೇ ನಾಯಕತ್ವ ನೀಡುವ ಹಂತಕ್ಕೇರಿದೆ. ಪೌರತ್ವ ಕಾಯ್ದೆ ವಿಚಾರವಾಗಿ ಜನತೆಗೆ ತಿಳಿಸುವ ಯತ್ನ ವ್ಯಾಪಕವಾಗಿ ನಡೆಯಬೇಕಿದೆ ಎಂದರು.

ತಾಲೂಕು ಬಿಜೆಪಿ ಅದ್ಯಕ್ಷ ರಾಘವೇಂದ್ರ ನಾಯಕ್‌ ಮಾತನಾಡಿ, ಗಂಡೆದೆಯ ಕೇಂದ್ರ ಸರ್ಕಾರದ ಈ ತೀರ್ಪನ್ನು ಜನತೆಗೆ ತಿಳಿಸಲು ಸಹಿ ಸಂಗ್ರಹ ಮಾಡುವುದಲ್ಲದೇ ಮನೆಮನೆಗೆ ತೆರಳಿ ಅರಿವು ಮೂಡಿಸಲಾಗುವುದು ಎಂದರು.
ಜಿಲ್ಲಾ ಬಿಜೆಪಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಟಿ.ಡಿ.ಮೇಘರಾಜ್‌ ಅವರನ್ನು ಅಭಿನಂದಿಸಲಾಯಿತು. ಮುಖಂಡರಾದ ಆರ್‌. ಮದನ್‌ ಇದ್ದರು. ಪ್ರಧಾನ ಕಾರ್ಯದರ್ಶಿಗಳಾದ ಹೆದ್ದೂರು ನವೀನ್‌ ನಿರೂಪಿಸಿದರು. ಬೇಗುವಳ್ಳಿ ಕವಿರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next