Advertisement

ತೀರ್ಥಹಳ್ಳಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ: ನಡೆಯದ ಭೂಸ್ವಾಧೀನ ಪ್ರಕ್ರಿಯೆ

02:02 AM Jun 20, 2019 | sudhir |

ಉಡುಪಿ: ಮಲ್ಪೆ -ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಹಾದು ಹೋಗುವ ಖಾಸಗಿ ಜಾಗಗಳ ಭೂ ಸ್ವಾಧೀನವಾಗಿಲ್ಲ. ಯೋಜನೆಯ ಡಿಪಿಆರ್‌ಗೆ ಅನುಮೋದನೆ ದೊರಕಿದ್ದು, ಉಡುಪಿ- ಪರ್ಕಳ ಹೊರತು ಪಡಿಸಿ ಇತರ ಕಡೆಗಳಿಗೆ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುವ ಆತಂಕವಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಒಟ್ಟು 24 ಗ್ರಾ.ಪಂ.ಗಳಲ್ಲಿ ರಸ್ತೆ ಹಾದುಹೋಗಲಿದೆ. ಸುಮಾರು 95.76ಹೆಕ್ಟೇರ್‌ ಪ್ರದೇಶದಲ್ಲಿ ಭೂಸ್ವಾಧೀನವಾಗಬೇಕಿದೆ. ಸಂತ್ರಸ್ತರಿಗೆ ಸುಮಾರು 41.47 ಕೋ.ರೂ. ಪರಿಹಾರ ಹಣ ನೀಡಬೇಕಾಗಿದೆ. ಯೋಜನೆ ಒಟ್ಟು 636 ಕೋ.ರೂ.ಗಳದು.

ಭೂಸ್ವಾಧೀನಕ್ಕೆ ಮುನ್ನ ಕಾಮಗಾರಿ!

ಮಣಿಪಾಲ, ಉಡುಪಿ, ಹೆಬ್ರಿ ಸೇರಿದಂತೆ ಒಟ್ಟು 12 ಕಡೆಗಳಲ್ಲಿ 31.987 ಕಿ.ಮೀ. ರಸ್ತೆ ಚತುಷ್ಪಥವಾಗಲಿದೆ. ಮೊದಲ ಹಂತದಲ್ಲಿ ಮಣಿಪಾಲ- ಕಡಿಯಾಳಿವರೆಗಿನ ಹೆದ್ದಾರಿ ಕಾಮಗಾರಿ ಮತ್ತು ಭೂಸ್ವಾಧೀನಕ್ಕೆ ಒಟ್ಟು 99.86 ಕೋ.ರೂ. ಮಂಜೂರಾಗಿದೆ. ಈ ಮಾರ್ಗದಲ್ಲಿ ಕೇವಲ ಶೇ. 10ರಷ್ಟು ಭಾಗ ಖಾಸಗಿ ಜಾಗ. ಮಣಿಪಾಲದ ಮಾಹೆ ಸೇರಿದಂತೆ ಇತರೆ ಖಾಸಗಿ ಜಾಗಗಳ ಮಾಲೀಕರ ಜತೆ ಶಾಸಕರು ಮಾತುಕತೆ ನಡೆಸಿ ಭೂಸ್ವಾಧೀನದ ಮುನ್ನವೇ ಕಾಮಗಾರಿ ನಡೆಸಲಾಗಿದೆ.

ಪರ್ಕಳದ ರಸ್ತೆ ನಿಧಾನ ಕಾರಣ?

Advertisement

ಪರ್ಕಳದಲ್ಲಿ ರಾ.ಹೆ. ಸಂಪೂರ್ಣವಾಗಿ ಖಾಸಗಿ ಜಾಗದ ಮೂಲಕ ಹಾದು ಹೋಗಲಿದೆ. ಈ ಪ್ರದೇಶದಲ್ಲಿ ಮನೆ ಮತ್ತು ಕೃಷಿ ಭೂಮಿಯಿರುವುದರಿಂದ ಹಳೆಯ ರಸ್ತೆಯನ್ನೇ ಅಗಲ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದು ಪರ್ಕಳ ಭಾಗದಲ್ಲಿ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

ಮಲ್ಪೆ-ಆದಿಉಡುಪಿ: 44 ಕೋ.ರೂ.

ಮಲ್ಪೆ-ತೀರ್ಥಹಳ್ಳಿ ರಾ.ಹೆ.ಯ ಎರಡನೇ ಹಂತವಾಗಿ ಆದಿ ಉಡುಪಿ- ಮಲ್ಪೆ ಕಾಮಗಾರಿ ಪ್ರಾರಂಭವಾಗಲಿದೆ. ಭೂಸ್ವಾಧೀನ ಮತ್ತು ಕಾಮಗಾರಿ ಸೇರಿದಂತೆ ಒಟ್ಟು 44 ಕೋ.ರೂ.ಗಳ ಡಿಪಿಆರ್‌ ಅನುಮೋದನೆಯಾಗಿದೆ. ಆದರೆ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆಯಾದ ತತ್‌ಕ್ಷಣ ಎರಡನೇ ಹಂತದ ಪ್ರಕ್ರಿಯೆ ಪ್ರಾರಂಭವಾಗಲಿದೆ.

– ಉಡುಪಿ-ಮಣಿಪಾಲ ಭೂ ಸ್ವಾಧೀನ

– 2ನೇ ಹಂತದಲ್ಲಿ ಆದಿಉಡುಪಿ-   ಮಣಿಪಾಲ ಡಿಪಿಆರ್‌ ಅನುಮೋದನೆ

– ಪರ್ಕಳದಲ್ಲಿ ಖಾಸಗಿ ಜಾಗದಲ್ಲಿ ತಕರಾರು

ಎಲ್ಲೆಲ್ಲ ಚತುಷ್ಪಥ?

ಮಲ್ಪೆಯಿಂದ ತೀರ್ಥಹಳ್ಳಿಯ ವರೆಗಿನ ನಗರ ಪ್ರದೇಶಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. 90 ಕಿ.ಮೀ.ನ 13 ಕಡೆಯಲ್ಲಿ 31.987 ಕಿ.ಮೀ.ವರೆಗೆ ಚತುಷ್ಪಥವಾಗಲಿದೆ. ತೀರ್ಥಹಳ್ಳಿ, ರಂಜದಕಟ್ಟೆ, ಮೇಗರವಳ್ಳಿ, ನಾಲೂರು, ಗುಡ್ಡೆಕೇರೆ, ಹೊಸೂರು, ಆಗುಂಬೆ, ಸೋಮೇಶ್ವರ ಪೇಟೆ, ಸೋಮೇಶ್ವರ ಗ್ರಾಮೀಣ, ಹೆಬ್ರಿ, ಪರ್ಕಳ, ಮಣಿಪಾಲ, ಉಡುಪಿಯಲ್ಲಿ ಚತುಷ್ಪಥ ರಸ್ತೆ, ಪೆರ್ಡೂರು ಮತ್ತು ಹಿರಿಯಡ್ಕದಲ್ಲಿ ಬೈಪಾಸ್‌ ನಿರ್ಮಾಣವಾಗಲಿದೆ. ಉಳಿದಂತೆ ಆಗುಂಬೆ ಘಾಟಿ ಪ್ರದೇಶ, ಕೈಮರ, ಉಂತೂರುಕಟ್ಟೆ, ಗುಡ್ಡೆಕೆರೆ, ಹೊಸೂರು, ಆಗುಂಬೆ, ತೀರ್ಥಹಳ್ಳಿ, ರಂಜದಕಟ್ಟೆ, ಮುಳಬಾಗಿಲು, ಮೇಗರವಳ್ಳಿ, ನಾಲೂರು ಗ್ರಾಮೀಣ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ.
ಪರ್ಕಳ-ಕಡಿಯಾಳಿ ವರೆಗೆ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಮತ್ತು ಕಾಮಗಾರಿ ಹಣ ಬಿಡುಗಡೆ ಆಗಿದೆ. ಮಳೆಗಾಲದಲ್ಲಿ ಕಂದಾಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಮತ್ತು ಸಂತ್ರಸ್ತರ ನೇತೃತ್ವದಲ್ಲಿ ಸರ್ವೇ ನಡೆಸಿ ಪರಿಹಾರ ನೀಡಲಾಗುತ್ತದೆ.
– ಕೆ. ರಘುಪತಿ ಭಟ್ ಶಾಸಕರು, ಉಡುಪಿ
– ತೃಪ್ತಿ ಕುಮ್ರಗೋಡು
Advertisement

Udayavani is now on Telegram. Click here to join our channel and stay updated with the latest news.

Next