Advertisement
ಅಕ್ರಮ ಮರಳು ದಂಧೆ ತಡೆಯಬೇಕಾದ ಅಧಿಕಾರಿಗಳು ಕಾಂಚಾಣ ಜಣ ಜಣದ ಆಟ ಕಂಡು ಜಾಣ ಮೌನ ವಹಿಸಿದ್ದಾರೆ. ಈ ಜಾಣ ಮೌನದ ಹಿಂದಿನ ಗುಟ್ಟೇನು ಎಂದು ಅಧಿಕಾರಿಗಳೇ ತಿಳಿಸಬೇಕಾಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ತುಂಗಾ ನದಿಯ ಅಕ್ಕಪಕ್ಕ ಭಾರೀ ಪ್ರಮಾಣದ ಮರಳು ಶೇಖರಣೆಯಾಗಿದ್ದು ಪ್ರತಿದಿನ ಹಗಲು- ರಾತ್ರಿಯೆನ್ನದೆ ತುಂಗಾ ನದಿಯ ಪಾತ್ರದಿಂದ ಹೊರಬೈಲು, ಕೌರಿಬೈಲು, ಬುಕ್ಲಾಪುರ, ಕುಶಾವತಿ, ಸಂಕದಹೊಳೆ,ಕಿತ್ತಿನಗದ್ದೆ, ಮೇಳಿಗೆ, ರಂಜದಕಟ್ಟೆ, ಕುರುವಳ್ಳಿ ತೋಟಗಾರಿಕಾ ಇಲಾಖೆ, ಹೆಗ್ಗೇಬೈಲು, ತುಂಬಡಿ, ಹುಣಸವಳ್ಳಿಯ ನದಿ ಪಾತ್ರದಿಂದ ಅಕ್ರಮವಾಗಿ ಪಿಕಪ್, ಟ್ರ್ಯಾಕ್ಟರ್‌ಗಳನ್ನು ಬಳಸಿ ಮರಳು ತೆಗೆಯಲಾಗುತ್ತಿತ್ತು.
Related Articles
Advertisement
ತೀರ್ಥಹಳ್ಳಿಯಿಂದ ಪಿಕಪ್ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಈ ದಂಧೆಕೋರರು ಒಂದು ಕಡೆ ಕಾಟಿಂಗ್ ಮಾಡಿ ಕಾಟಿಂಗ್ ಮಾಡಿದ ಮರಳನ್ನು ಟಿಪ್ಪರ್ ಮತ್ತು ಲಾರಿಗೆ ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರತಿ ದಿನ ಅಕ್ರಮ ಮರಳು ಸಾಗಾಟದ ವಾಹನಗಳು ತೀರ್ಥಹಳ್ಳಿ ಪಟ್ಟಣದ ಮುಖಾಂತರ ಮಾಳೂರು ಠಾಣೆ ಹಾಗೂ ಮಂಡಗದ್ದೆ ಅರಣ್ಯ ಇಲಾಖೆ ಕಚೇರಿ ಎದುರೇ ಯಾವುದೆ ಭಯಭೀತಿ ಇಲ್ಲದೇ ಸಂಚರಿಸುತ್ತಿವೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ತೀರ್ಥಹಳ್ಳಿ ಮತ್ತು ಶಿವಮೊಗ್ಗದ ನಡುವಿನ ಗಾಜನೂರಿನ ಫಾರೆಸ್ಟ್ ಗೇಟ್ ಬಳಿ ಈ ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿ ಹೋಗುತ್ತಿದ್ದಂತೆ ಲಾರಿಯನ್ನು ತಡೆದು ತಪಾಸಣೆ ಮಾಡದೆ ಲಾರಿಯೊಂದಕ್ಕೆ ಎರಡು ಸಾವಿರ ರೂ. ಹಣ ಪಡೆದುಕೊಂಡು ಗೇಟ್‌ನಿಂದ ಬಿಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಟಿಪ್ಪರ್ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.
ರಾತ್ರಿ ಮತ್ತು ಬೆಳಗಿನ ಹೊತ್ತು ಅಕ್ರಮ ಮರಳು ಸಾಗಾಟದ ವಾಹನಗಳು ರಸ್ತೆಯಲ್ಲಿ ಅತಿ ವೇಗ ಮತ್ತು ಪೈಪೋಟಿಯಿಂದ ಸಂಚರಿಸುತ್ತಿರುವುದರಿಂದ ಬೆಳಗಿನ ಸಮಯದಲ್ಲಿ ಓಡಾಡುವ ಪಾದಚಾರಿಗಳಿಗೆ, ವಾಹನ ಸವಾರರಿಗೆ ಕಂಟಕ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾ ಧಿಕಾರಿಗಳು ತೀರ್ಥಹಳ್ಳಿಯ ಡಿವೈಎಸ್‌ಪಿ ರವಿಕುಮಾರ್, ಸರ್ಕಲ್ ಇನ್ಸೆಪೆಕ್ಟರ್ ಗಣೇಶಪ್ಪ, ಸಬ್ ಇನ್ಸೆಪೆಕ್ಟರ್ ಸುಷ್ಮಾ ಅವರು ತಕ್ಷಣ ಗಮನಿಸಿ ಅಕ್ರಮ ಮರಳು ತುಂಬಿ ಅತಿ ವೇಗದ ಸಾಗಾಟಕ್ಕೆ ತಡೆ ನೀಡಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ವಿಶೇಷ ವರದಿ