Advertisement

Tirthahalli; ಹೊಟ್ಟೆಕಿಚ್ಚು ಮಾಡಿ ರಾಜಕಾರಣ ಮಾಡಲು ಆಗುವುದಿಲ್ಲ: ಆರಗ ಜ್ಞಾನೇಂದ್ರ

08:57 PM Mar 04, 2024 | Team Udayavani |

ತೀರ್ಥಹಳ್ಳಿ : ಹಿಂದಿನ ಅವಧಿಯಲ್ಲಿ ಮೀಟಿಂಗ್ ಮಾಡಿ ಹೊರ ಬರುವಾಗ ಕಟ್ಟಡ ಕುಸಿದು ಬಿತ್ತು. 5 ನಿಮಿಷ ಮೀಟಿಂಗ್ ಲೇಟ್ ಆಗಿದ್ದರು ನಾವೆಲ್ಲರೂ ನೆನಪಾಗಿ ಇರುತ್ತಿದ್ದೇವು. ನನಗೆ ಆ ಕ್ಷಣ ತುಂಬಾ ಬೇಜಾರಾಯಿತು. ಆಗಷ್ಟೇ ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಅವರು ಜವಾಬ್ದಾರಿ ವಹಿಸಿಕೊಂಡಿದ್ದರು. ನಾನು ಕೇಳಿದ ಕೂಡಲೇ 3 ಕೋಟಿ ಹಣವನ್ನು ನೀಡಿದ್ದರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸೋಮವಾರ ಅತ್ಯಂತ ಭವ್ಯವಾದ ತಾ.ಪಂ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪಿಡಬ್ಲ್ಯೂಡಿ ಇಲಾಖೆಯಿಂದ 10 ಕೋಟಿ ತಂದು ಒಟ್ಟು 13.5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದೇವೆ. 6 ತಿಂಗಳ ಕಾಲ ಇಂಜಿನಿಯರ್ ಬಳಿ ಚರ್ಚಿಸಿ ನಾಲ್ಕು ಇಲಾಖೆ ಬರುವ ಹಾಗೆ ಈ ಒಂದು ಭವ್ಯವಾದ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಈ ಕಟ್ಟಡ ಉದ್ಘಾಟನೆ ಮಾಡಲು ನಮ್ಮ ಮನೆ ಗೃಹಪ್ರವೇಶ ಮಾಡುವ ರೀತಿಯಲ್ಲಿ ಹೋಮ ಹವನ ಮಾಡಿ ಪೂಜೆ ಸಲ್ಲಿಸಿದ್ದೇವೆ ಎಂದರು.

ತೀರಾ ಹೊಟ್ಟೆಕಿಚ್ಚು ಮಾಡಿ ರಾಜಕಾರಣ ಮಾಡಲು ಆಗುವುದಿಲ್ಲ, ನಾವು ಕಚ್ಚಾಟ ನಡೆಸಿದ್ದೇವೆ ಆದರೆ ಈಗ ಹಾಗೆ ಮಾಡಬಾರದು ಎಂದು ಕೊಂಡಿದ್ದೇನೆ. ಈ ಕಾರಣಕ್ಕೆ ಎಲ್ಲಾ ಶಾಸಕರನ್ನು ಕರೆದು ಸನ್ಮಾನ ಮಾಡಬೇಕು ಎಂದು ಅಂದುಕೊಂಡಿದ್ದೆ. ಇವತ್ತು ಕೆಲವರು ಬಂದಿಲ್ಲ ಆದರೆ ಅವರು ಕೂಡ ಶುಭ ಹಾರೈಸಿದ್ದಾರೆ. ತಾ.ಪಂ ಮಾಜಿ ಸದಸ್ಯರು ಬರಬೇಕು ಎಂದು ಪ್ರತಿಯೊಬ್ಬರನ್ನು ಕರೆದಿದ್ದೇವೆ ಎಂದರು.

5 ಬಾರಿ ಶಾಸಕರು ಏನು ಮಾಡಿದ್ದಾರೆ ಎಂದು ಕೆಲವರು ಕೇಳುತ್ತಾರೆ, ಅವರಿಗೆ ನಾನು ಹೇಳುವುದು ಇಷ್ಟೇ, ಈ ಭವ್ಯವಾದ ಕಟ್ಟಡ, ಹಳ್ಳಿ ಹಳ್ಳಿಗೂ ನೂತನ ರಸ್ತೆಗಳು , ತುಂಗಾ ನದಿಗೆ ಅಡ್ಡಲಾಗಿ ಹೊಸ ಸೇತುವೆ, ಬಾಳೆಬೈಲು ಕಾಲೇಜು, ಪಟ್ಟಣದಲ್ಲಿ 24 ಗಂಟೆ ನೀರು, ಶುದ್ಧ ಕುಡಿಯುವ ಜಲಜೀವನ್ ನೀರು ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಮಾಡಿದ್ದೇನೆ. ಇದೆ ಪ್ರತಿಯೊಂದಕ್ಕೂ ಉತ್ತರ ಎಂದು ಹೇಳಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಅದ್ಬುತವಾದ ಕಟ್ಟಡದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸವಾಗಿದೆ. ಕಟ್ಟಡದಲ್ಲಿ ಒಳ್ಳೆ ಒಳ್ಳೆಯ ಕೆಲಸಗಳು ಆಗಬೇಕಿದೆ. 76000 ಶಾಲೆಗಳು ನನ್ನ ಇಲಾಖೆ ಅಡಿಯಲ್ಲಿ ಬರುತ್ತದೆ. ಬಹಳ ದೊಡ್ಡ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ, ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು ಎಂಬುದೇ ನನ್ನ ಆಸೆ ಎಂದರು.

Advertisement

ಬಿ ವೈ ರಾಘವೇಂದ್ರ ಮಾತನಾಡಿ ತೀರ್ಥಹಳ್ಳಿ ತಾಲೂಕಿನ ಅಭಿವೃದ್ಧಿ ಕಾರ್ಯಕ್ಕೆ, ವೇಗಕ್ಕೆ ಕಿರೀಟದಂತೆ ಕಾಣಿಸುತ್ತಿರುವ 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಭವ್ಯ ಕಟ್ಟಡ ಹೊರಗಡೆಯಿಂದ ಸಾಮಾನ್ಯ ಕಟ್ಟಡತರ ಕಂಡರೂ ಒಳಗಡೆ ಫೈವ್ ಸ್ಟಾರ್ ಹೋಟೆಲ್ ರೀತಿ ನಿರ್ಮಾಣಗೊಂಡಿದೆ. ಈ ಭಾಗದ ಜನರ ಸಮಸ್ಯೆಯನ್ನು ನೀಗಿಸುವ ಕಟ್ಟಡವಾಗಲಿ ಅದಕ್ಕೆ ಅಧಿಕಾರಿಗಳು ಶ್ರಮ ಹಾಕಬೇಕು ಎಂದರು.

ಈಗಾಗಲೇ ತೀರ್ಥಹಳ್ಳಿಗೆ ಸಾಕಷ್ಟು ಅಭಿವೃದ್ಧಿ ಆಗಿದೆ. 55 ಕೋಟಿ ವೆಚ್ಚದಲ್ಲಿ ತುಂಗಾ ನದಿಗೆ ಸೇತುವೆ ಉದ್ಘಾಟನೆ ಆಗಿದೆ. ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಮಾಡಲು ಚರ್ಚೆ ನಡೆಸಿದ್ದೇವೆ, ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ ಸುರಂಗ ಮಾರ್ಗ ಮಾಡಲು ಚರ್ಚೆ ನಡೆಸಲಿದ್ದೇವೆ. ಕುಡಿಯುವ ನೀರಿನ ಜಲಜೀವನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ಬಂದಿದೆ. ಶಾಸಕರ ನೇತೃತ್ವದಲ್ಲಿ ತೀರ್ಥಹಳ್ಳಿಗೆ ಕಳೆ ಬರುವ ಕೆಲಸ ಆಗಿದೆ ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ಮಾತನಾಡಿ,ನಾಲ್ಕು ಶಾಖೆಗಳು ಈ ಕಟ್ಟಡದಲ್ಲಿ ನಡೆಯಲಿದೆ. ಕಡಿದಾಳ್ ಮಂಜಪ್ಪನವರಿಂದ ಆರಗ ಜ್ಞಾನೇಂದ್ರ ರವರೆಗೆ ಹಲವರು ಶಾಸಕರಾಗಿ ಹಳೆಯ ಕಟ್ಟಡದಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಯೊಂದು ಇಲಾಖೆಗೆ ಜನರು ಅಲೆಯುವ ಬದಲು ಒಂದೇ ಕಟ್ಟಡದಲ್ಲಿ ಎಲ್ಲಾ ಇಲಾಖೆ ಕೆಲಸ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಕಟ್ಟಡದಿಂದ ಅಧಿಕಾರಿಗಳಿಂದ ಜನರಿಗೆ ಅನುಕೂಲವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ. ಪಂ ಅಧ್ಯಕ್ಷರಾದ ಗೀತಾ ರಮೇಶ್, ತಹಶೀಲ್ದಾರ್ ಜಕ್ಕಣ್ಣ ಗೌಡರ್, ಕಡಿದಾಳ್ ದಿವಾಕರ್, ರುದ್ರೆಗೌಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next