ಮೂಡುಬಿದಿರೆ : ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಆಝಾದಿ ಕಾ ಅಮೃತ್ ಮಹೋತ್ಸವದ ತಿರಂಗಾ ಯಾತ್ರೆ ಅಭಿಯಾನ ಸಮಿತಿ ಹಮ್ಮಿಕೊಂಡ “ಮೂಲ್ಕಿ ತಾಲೂಕಿನಿಂದ ಮೂಡುಬಿದಿರೆ ತಾಲೂಕಿಗೆ 100 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ಸಾಗಿ ಬಂದ ತಿರಂಗಾ ಯಾತ್ರೆ ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಎದುರು ರವಿವಾರ ಅಪರಾಹ್ನ ಸಂಪನ್ನಗೊಂಡಿತು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ಕಾರ್ನಾಡು ಸದಾಶಿವ ರಾಯರ ಹುಟ್ಟೂರಾದ ಮೂಲ್ಕಿಯಿಂದ ಮುಂಜಾನೆ 8ಕ್ಕೆ ಹೊರಟು, ಭಾರತದ ಪ್ರಪ್ರಥಮ ಸ್ವಾತಂತ್ರÂ ಯೋಧೆ ವೀರ ರಾಣಿ ಅಬ್ಬಕ್ಕಳ ಹುಟ್ಟೂರಾದ ಮೂಡುಬಿದಿರೆಗೆ ಸಂಜೆ 6.30ಕ್ಕೆ ತಲುಪಿದ ತಿರಂಗಾ ಯಾತ್ರೆಯು ಅಭೂತಪೂರ್ವ ಯಶಸ್ಸು ಕಂಡಿದೆ; 10 ತಾಸು ಕಾಲ, 30 ಕಿ.ಮೀ. ಉದ್ದಕ್ಕೆ ಮೂರು ಮೀಟರ್ ಅಗಲ, ನೂರು ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ನಡೆದುಕೊಂಡೇ ಸಾಗಿ ಬಂದಿರುವುದು ದಾಖಲೆಯಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಮಾತನಾಡಿ, ಭಾರತ ಯಾವುದೇ ಬಾಹ್ಯ ಆಕ್ರಮಣಗಳಿಗೆ ಜಗ್ಗಿಲ್ಲ; ತಾನಾಗಿ ಯಾವತ್ತೂ ಆಕ್ರಮಣ ಮಾಡಿಲ್ಲ. ವಿಶ್ವದಲ್ಲೇ ಇನ್ನೊಂದೆಡೆ ಕಾಣದ, ದೈವದತ್ತ ಪ್ರಾಕೃತಿಕ ಸ್ವರೂಪ, ಸಂಪನ್ಮೂಲಗಳ ಆಗರವಾದ ಭಾರತವು ಧರ್ಮ, ಸಂಸ್ಕೃತಿ, ಕಲೆ, ವಿಜ್ಞಾನ, ಶಿಕ್ಷಣ ಹೀಗೆ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಕಸ್ತೂರಿ ಪಂಜ, ಉಪಾಧ್ಯಕ್ಷ ಈಶ್ವರ ಕಟೀಲು, ವಕ್ತಾರ ಜಗದೀಶ ಶೇಣವ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮೂಲ್ಕಿ ನಗರ ಪಂ. ಅಧ್ಯಕ್ಷ ಸುಭಾಷ ಶೆಟ್ಟಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಹಿರಿಯ ವಕೀಲ ಕೆ. ಆರ್. ಪಂಡಿತ್, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ತಿರಂಗ ಅಭಿಯಾನ ಸಂಚಾಲಕರಾದ ಸುಧಾಕರ ಆಚಾರ್ಯ, ಅಭಿಲಾಷ್ ಶೆಟ್ಟಿ, ಪ್ರಮುಖರಾದ ಗೋಪಾಲ ಶೆಟ್ಟಿಗಾರ್, ಕೇಶವ ಕರ್ಕೇರ, ಲಕ್ಷ್ಮಣ ಪೂಜಾರಿ, ಭಾರತಿ ಶೆಟ್ಟಿ ಮೊದಲಾದವರಿದ್ದರು.
ಭಾರತ ಮಾತೆಯ ಭಾವಚಿತ್ರ ಮುಂದಿರಿಸಿಕೊಂಡು ಸುಮಾರು 3 ಸಾವಿರ ಮಂದಿ ಹಾದಿಯುದ್ದಕ್ಕೂ ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಗೈಯುತ್ತ, ದೇಶ ಭಕ್ತಿಗೀತೆಯ ಗಾಯನದೊಂದಿಗೆ ಹೆಜ್ಜೆಹಾಕಿದರು.