ಕಲಬುರಗಿ: ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಒಂದೇ ದಿನ ಹುಲಿಯಾಗಿ ಬಾಳು ಎಂಬುದನ್ನು ಸಾಧಿಸಿ ತೋರಿಸಿದ ವ್ಯಕ್ತಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು. ಶನಿವಾರ ಜೇವರ್ಗಿ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಜೆಪಿ ಸ್ಥಾಪಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಟೋಪಿ ಹಾಕಿಕೊಂಡು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿ, ಟಿಪ್ಪು ಒಬ್ಬ ದೇಶ ಪ್ರೇಮಿ ಎಂದು ಹೇಳಿದ್ದರು. ಆದರೆ, ಈಗ ಸ್ವಾರ್ಥ ರಾಜಕೀಯಕ್ಕಾಗಿ ಟಿಪ್ಪು ಕುರಿತು ಅವಹೇಳನಕಾರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ರದ್ದು ಮಾಡುವುದಾಗಿ ಹೇಳಿರುವಯಡಿಯೂರಪ್ಪ ಅವರ ಹೇಳಿಕೆ ಮೂರ್ಖತನದ್ದು ಎಂದರು. ಹಜರತ್ ಟಿಪ್ಪು ಸುಲ್ತಾನ್ ಶ್ರೇಷ್ಠ ಆಡಳಿತಗಾರ. ಅವರು ಆಡಳಿತ ಸುಧಾರಣೆಗಾಗಿ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಟಿಪ್ಪು ಸುಲ್ತಾನ್ ಧೈರ್ಯ ಮೆಚ್ಚುವಂತದ್ದು, ಸ್ವಾತಂತ್ರ್ಯಾ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಟ ಮಾಡಿದ ವೀರ ಎಂದು ಹೇಳಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡ್ಲಿಗಿ, ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ್, ಫಯಾಜ್ ಜಮಾದಾರ್, ಮಹೇಬೂಬ್ ಮನಿಯಾರ್, ಜಿಪಂ ಸದಸ್ಯ ದೇವಕಿ ಚನ್ನಮಲ್ಲಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಖಾಸಿಂ ಪಟೇಲ್ ಮುದವಾಳ, ತಾಪಂ ಅಧ್ಯಕ್ಷ ಚಂದಮ್ಮ ಸಂಗಣ್ಣ ಇಟಗಾ, ರಾಜಶೇಖರ ಸೀರಿ, ರುಕ್ಮ ಪಟೇಲ್ ಹಿಜೇರಿ, ಶೋಕತ್ ಅಲಿ ಆಲೂರ್, ಮರೆಪ್ಪ ಸರಡಗಿ, ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಹಾಗೂ ನೂರಾರು ಮುಸ್ಲಿಂ ಜನಾಂಗದ ನಾಯಕರು, ಟಿಪ್ಪು ಅಭಿಮಾನಿಗಳು ಭಾಗವಹಿಸಿದ್ದರು.