ಲಂಡನ್: ಎಲ್ಲವೂ ಅಂದುಕೊಂಡದ್ದೇ ಆದಲ್ಲಿ ಇನ್ನೆರಡು ವರ್ಷಗಳಲ್ಲಿ ಮೈಸೂರು ರಾಜ್ಯ ಆಳಿದ ಟಿಪ್ಪು ಸುಲ್ತಾನ್ ವಂಶಸ್ಥೆಯೊಬ್ಬರು ಬ್ರಿಟಿಷರ ನೋಟಿನಲ್ಲಿ ರಾರಾಜಿಸಲಿದ್ದಾರೆ! ಬ್ರಿಟಿಷ್ ಗೂಢಚಾರಿಣಿಯಾಗಿ ಸಾಹಸ ಮೆರೆದ ನೂರ್ ಇನಾಯತ್ ಖಾನ್ ಚಿತ್ರವನ್ನು 50 ಪೌಂಡ್ ನೋಟಿನಲ್ಲಿ ಮುದ್ರಿಸಬೇಕು ಎಂದು ಬ್ರಿಟನ್‌ನಲ್ಲಿ ಆಂದೋಲನವೇ ನಡೆದಿದೆ. ಐರೋಪ್ಯ ಒಕ್ಕೂಟದಿಂದ ಹೊರಗೆ ಬಂದ ಅನಂತರದಲ್ಲಿ ಈಗ ಬ್ರಿಟನ್ ತನ್ನದೇ ಪ್ರತ್ಯೇಕ ನೋಟುಗಳನ್ನು ಬಿಡುಗಡೆ ಮಾಡಲಿದೆ. ಈ ಪೈಕಿ 50 ಪೌಂಡ್ ನೋಟು ಅತೀ ಹೆಚ್ಚು ಮೌಲ್ಯದ್ದಾಗಿದೆ. 2020ರಿಂದ ಇದು ಚಲಾವಣೆಗೆ ಬರಲಿದೆ. ಹೀಗಾಗಿ ಈ ನೋಟಿನ ಮೇಲೆ ನೂರ್ ಫೋಟೋ ಮುದ್ರಿಸಬೇಕು ಎಂಬ ಆಗ್ರಹ ಹೋರಾಟಗಾರರು ಹಾಗೂ ಇತಿಹಾಸಕಾರರಿಂದ ಕೇಳಿ ಬಂದಿದೆ.
ಈ ಅಭಿಯಾನ ಆರಂಭಿಸಿದ್ದು ಹೋರಾಟ ಗಾರ್ತಿ ಝೆಹ್ರಾ ಝೈದಿ. ಇದನ್ನು ಇತಿಹಾಸಕಾರ ಹಾಗೂ ಬಿಬಿಸಿ ನಿರೂಪಕ ಡ್ಯಾನ್ ಸ್ನೋ ಕೂಡ ಬೆಂಬಲಿಸಿದ್ದಾರೆ. ಆನ್‌ಲೈನ್ ಪಿಟಿಷನ್‌ಗೂ ಸಹಿ ಹಾಕಿದ್ದಾರೆ. ಒಂದು ವೇಳೆ ನೂರ್‌ಅವರ ಫೋಟೋವನ್ನು ಕರೆನ್ಸಿಯ ಮೇಲೆ ಮುದ್ರಿಸಿದರೆ ಯುನೈಟೆಡ್ ಕಿಂಗ್‌ಡಮ್ ಕರೆನ್ಸಿಯಲ್ಲಿ ಕಾಣಿಸಿಕೊಂಡ ಪ್ರಥಮ ಜನಾಂಗೀಯ ಅಲ್ಪಸಂಖ್ಯಾಕೆ ಎಂಬ ಕೀರ್ತಿಯನ್ನೂ ನೂರ್ ಪಡೆಯಲಿದ್ದಾರೆ.
ನೂರ್ ಸಾಧನೆ ರೋಚಕ: 1914ರಲ್ಲಿ ರಷ್ಯಾದ ಕ್ರೆಮ್ಲಿನ್‌ನಲ್ಲಿ ನೂರ್ ಜನಿಸಿದ್ದರು. ಈಕೆಯ ತಂದೆ ಇನಾಯತ್ ಖಾನ್ ಜನಪ್ರಿಯ ಸಂಗೀತಗಾರರು. ಈಕೆಯ ಮುತ್ತಜ್ಜಿ ಅಂದರೆ, ತಂದೆಯ ಅಜ್ಜಿಯೇ ಟಿಪ್ಪು ಸುಲ್ತಾನನ ಮೊಮ್ಮಗಳು. ಎರಡನೇ ವಿಶ್ವಯುದ್ಧದಲ್ಲಿ ಅವರು ಫ್ರೆಂಚ್ ರೆಡ್ ಕ್ರಾಸ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು. ಅನಂತರ ಇಂಗ್ಲೆಂಡ್‌ನಲ್ಲಿ ಮಹಿಳಾ ವಾಯುಪಡೆಗೆ ಸೇರಿದ್ದರು. ಅವರು ಫ್ರೆಂಚ್ ಕಲಿತಿದ್ದರಿಂದ ರೇಡಿಯೋ ಆಪರೇಟರ್ ಆಗಿ ನೇಮಿಸಲಾಗಿತ್ತು. ಆಗ ರೇಡಿಯೋ ಆಪರೇಟರ್‌ಗಳೇ ಸಂವಹನಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಗೂಢಚಾರರಾಗಿರುತ್ತಿದ್ದರು. 1943ರಲ್ಲಿ ಅವರನ್ನು ನಾಜಿ ವಶಪಡಿಸಿಕೊಂಡಿದ್ದ ಫ್ರಾನ್ಸ್‌ನ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಅದೇ ವರ್ಷ ಈ ಭಾಗವನ್ನು ನಾಜಿ ವಶಪಡಿಸಿ ಕೊಂಡಿದ್ದರಿಂದ ನೂರ್ ಅವರು ಗೂಢಚಾರಿಣಿ ಎಂಬುದು ಪತ್ತೆಯಾಗಿ ಬಂಧಿಸಲಾಯಿತು. ಮರುವರ್ಷ ಅಂದರೆ, 1944ರಲ್ಲಿ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು.