ಬೆಂಗಳೂರು:ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನವೆಂಬರ್ 10ರಂದು ನಡೆಯಲಿರುವ ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2ಗಂಟೆಯೊಳಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಅವರು ಟಿಪ್ಪು ಜಯಂತಿ ಆಚರಣೆ ವೇಳೆ ಭದ್ರತೆ ಸಂಬಂಧ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಿದ ಬಳಿಕ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು.
ಟಿಪ್ಪು ಜಯಂತಿ ವೇಳೆ ಪರ ಅಥವಾ ವಿರೋಧ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ನೀಡುವಂತಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಸಭಾಂಗಣದಲ್ಲಿ ಮಾತ್ರ ಆಚರಣೆಗೆ ಅವಕಾಶ ನೀಡಬೇಕು. ಟಿಪ್ಪು ಜಯಂತಿ ಆಚರಣೆಯ ಸ್ಥಳ ಹೊರತುಪಡಿಸಿ ಬೇರೆಡೆ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ಪ್ರಚೋದನಕಾರಿ ಪೋಸ್ಟ್ ಹಾಕುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಭದ್ರತೆ ದೃಷ್ಟಿಯಿಂದ ಈ ಆಚರಣೆಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಣೆಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಚರಣೆ ಮಾಡಿದ್ದರೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಹೀಗಾಗಿ ಸ್ಥಳ ಬದಲಾವಣೆ ಮಾಡಿದ್ದೇವೆ. ಅಲ್ಲದೇ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಗಲಭೆ, ಶಾಂತಿ ಭಂಗ ಮಾಡಲು ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.