Advertisement
ಈ ಸಂಬಂಧ ಕೊಡಗಿನ ಕೆ.ಪಿ ಮಂಜುನಾಥ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಇದೊಂದು ಸರ್ಕಾರದ ನೀತಿ-ನಿರ್ಧಾರದ ವಿಷಯ ಆಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು 2016 ಮತ್ತು 2017ರಲ್ಲಿ ನ್ಯಾಯಾಲಯ ಆದೇಶ ನೀಡಿದೆ. ಹೀಗಿರುವಾಗ ಈಗ ವ್ಯತಿರಿಕ್ತ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
Related Articles
Advertisement
ಅಲ್ಲದೇ 2016ರ ನ.8ರಂದು ವಿವರವಾದ 15 ಪುಟಗಳ ಆದೇಶ ನೀಡಿರುವ ಸರ್ಕಾರ, ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಕಾರಣಗಳ ಸಮೇತ ಸಮರ್ಥಿಸಿಕೊಂಡಿದೆ. ಅದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ, ನೀವು ಸರ್ಕಾರದ ಆ ಆದೇಶವನ್ನು ಪ್ರಶ್ನಿಸಿಲ್ಲ. ಅದರ ಬದಲಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಜಿದಾರ ಪರ ವಕೀಲರ ಕುರಿತು ನ್ಯಾಯಪೀಠ ಅಸಮಧಾನ ವ್ಯಕ್ತಪಡಿಸಿತು.
ಸರ್ಕಾರದ ಆಕ್ಷೇಪಣೆ ಏನು?: ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಟಿಪ್ಪು ಜಯಂತಿ ಆಚರಿಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಅರ್ಜಿದಾರರ ಮನವಿ ಆಧರಿಸಿ 2016ರ ನ.8ರಂದು ಹೊರಡಿಸಿರುವ ಆದೇಶವನ್ನು ಉಲ್ಲೇಖೀಸಿರುವ ಸರ್ಕಾರ, ಅರ್ಜಿದಾರರು ಪ್ರಚಾರಕ್ಕಾಗಿ ಇಂತಹ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಮತ್ತು ಸೌರ್ಹಾದತೆ ನೆಲೆಸಬೇಕು ಎನ್ನುವ ಕಾರಣಕ್ಕೆ ಕನಕದಾಸ ಜಯಂತಿ, ಗಾಂಧಿ ಜಯಂತಿ, ಬಸವ, ಸಂಗೋಳ್ಳಿ ರಾಯಣ್ಣ ಸೇರಿದಂತೆ ಹಲವು ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಅಂತೆಯೇ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಟಿಪ್ಪು ಅವರ ಬಗ್ಗೆ ಅರ್ಜಿದಾರರಿಗೆ ತಪ್ಪು ಕಲ್ಪನೆ ಇದೆ. ಅವರು ಇತಿಹಾಸ ತಿಳಿದುಕೊಂಡಿಲ್ಲ.
ಅದೇ ರೀತಿ ಕಳೆದ ವರ್ಷ ಟಿಪ್ಪು ಜಯಂತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ, ಎಲ್ಲೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಈಬಾರಿಯೂ ಕೊಡಗು ಸೇರಿದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ, 584 ಕೋಮು ಸೌಹಾರ್ದತೆ ಕದಡಬಹದು ಎಂಬ ಶಂಕೆ ಇರುವ 500ಕ್ಕೂ ಹೆಚ್ಚು ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗುವುದು. ಜೊತೆಗೆ ಜಿಲ್ಲೆಯ ಚಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಹಾಕಲಾಗಿದೆ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.