ಬೆಂಗಳೂರು:ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸಮರ್ಥನೆ ಹಾಗೂ ವಿಪಕ್ಷ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ವಿರೋಧದ ನಡುವೆಯೇ ಶನಿವಾರ ರಾಜ್ಯಾದ್ಯಂತ ಸರಕಾರ ಟಿಪ್ಪು ಜಯಂತಿ ಆಚರಿಸಿದ್ದು, ಕೊಡಗು ಜಿಲ್ಲೆ ಬಂದ್ ಮಾಡಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೇ ರಾಜ್ಯದ ವಿವಿಧೆಡೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಗಿ ಪೊಲೀಸ್ ಸರ್ಪಗಾವಲಿನಲ್ಲಿ ಟಿಪ್ಪು ಜಯಂತಿ ಆಚರಿಸಿದ್ದು, ಏತನ್ಮಧ್ಯೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿದೆ.
ಭಾರತೀಯ ಜನತಾ ಪಕ್ಷ ಮತ್ತು ಕೊಡವ ನ್ಯಾಶನಲ್ ಕೌನ್ಸಿಲ್ ಸೇರಿದಂತೆ ವಿವಿಧ ಸಂಘಟನೆಗಳು ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ಗೆ ಕರೆ ಕೊಟ್ಟಿದ್ದವು. ಅಹಿತಕರ ಘಟನೆ ನಡೆಯದಂತೆ ತಡೆಯಲು ಹುಬ್ಬಳ್ಳಿ, ಧಾರವಾಡ, ಕೊಡಗು ಸೇರಿದಂತೆ ಹಲವೆಡೆ ಬೆಳಗ್ಗೆ 6ಗಂಟೆಯಿಂದ ಭಾನುವಾರ 7ಗಂಟೆವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಮಡಿಕೇರಿಯ ಕೋಟೆ ಆವರಣದಲ್ಲಿ ಆಯೋಜಿಸಿರುವ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸೇರಿದಂತೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.ವಿರಾಜಪೇಟೆಯಲ್ಲಿ ಶಾಸಕ ಕೆಜಿ ಬೋಪಯ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಲ್ಲಿ ಪ್ರತಿಭಟನೆ ;ಹಲವರು ವಶಕ್ಕೆ
ಮಂಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳು ಬೀದಿಗಿಳಿದು ಆಕ್ರೋಶ ಹೊರ ಹಾಕಿದ್ದು , ಸರ್ಕಾರದ ವಿರುದ್ಧ ಕಪ್ಪು ಬಾವುಟ ತೋರಿಸಿ ಧಿಕ್ಕಾರ ಕೂಗಿದ್ದಾರೆ. ಜಿಲ್ಲೆಯ ವಿವಿಧೆಡೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಜಿಲ್ಲಾ ಪಂಚಾಯತ್‌ಗೆ ಹಿಂದೂಪರ ಸಂಘಟನೆಗಳಿಂದ ಮುತ್ತಿಗೆ ಹಾಕಲು ಯತ್ನಿಸಲಾಗಿದ್ದು, ಪೊಲೀಸರು ತಡೆದಿದ್ದಾರೆ. ನಗರದಲ್ಲಿ ಸೆಕ್ಷನ್ 144 ಜಾರಿ ಗೊಳಿಸಲಾಗಿದೆ.