Advertisement

ಗರ್ಭಿಣಿಯರಿಗೆ ಸಲಹೆಗಳು

07:20 PM Oct 08, 2019 | Lakshmi GovindaRaju |

ಗರ್ಭಿಣಿಯಾಗಿದ್ದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದಕ್ಕೆ Gestational diabetes mellitus (GDM) ಎನ್ನುತ್ತಾರೆ. ಸಾಮಾನ್ಯವಾಗಿ, ಹೆರಿಗೆಯ ನಂತರ ಇದು ಕಣ್ಮರೆಯಾಗುತ್ತದೆ. ಗರ್ಭಧಾರಣೆಯ ದ್ವಿತೀಯಾರ್ಧದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ, ಹುಟ್ಟುವ ಮಕ್ಕಳು ಹದಿಹರೆಯದಲ್ಲೇ ಸಕ್ಕರೆಕಾಯಿಲೆಗೆ ತುತ್ತಾಗುವ, ಸ್ಥೂಲಕಾಯಿಗಳಾಗುವ ಅಪಾಯ­ವಿರುತ್ತದೆ. ಹೆರಿಗೆಯ ಸಂದರ್ಭದಲ್ಲಿಯೂ ತಾಯಿ-ಮಗುವಿಗೆ ಕಷ್ಟ­ವಾ­ಗಬಹುದು. ಆದ್ದರಿಂದ, ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಉತ್ತಮ…

Advertisement

ದೈಹಿಕ ಚಟುವಟಿಕೆ: ಗರ್ಭಿಣಿಯರು ದಿನಕ್ಕೆ ಕನಿಷ್ಠ 15-30 ನಿಮಿಷ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ದೂರವಿಡಬಹುದು. ದೈಹಿಕ ಚಟುವಟಿಕೆಗಳಿಂದ ಹೊಟ್ಟೆಯಲ್ಲಿರೋ ಮಗುವಿನ ಬೆಳವಣಿಗೆಯೂ ಉತ್ತಮವಾಗುತ್ತದೆ. ವೈದ್ಯರ ಸಲಹೆ ಪಡೆದ ನಂತರವೇ ವ್ಯಾಯಾಮ ಮಾಡಿ.

ಆಹಾರದಲ್ಲಿ ಪಥ್ಯ ಇರಲಿ: ಗರ್ಭಾವಸ್ಥೆಯಲ್ಲಿ ಸಕ್ಕರೆ ಪ್ರಮಾಣದ ನಿಯಂತ್ರಣಕ್ಕೆ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರುವುದು ಅಗತ್ಯ. ಮಗುವಿನ ಬೆಳವಣಿಗೆಗೆ ಪೂರಕವಾದ ಪ್ರೋಟಿನ್‌, ಪೋಷಕಾಂಶಯುಕ್ತ ಆಹಾರವನ್ನು ನಿಯಮಿತವಾಗಿ ಸೇವಿಸಿ. ಆಹಾರದಲ್ಲಿ ಹೆಚ್ಚಿನ ಫೈಬರ್‌ ಮತ್ತು ಕಡಿಮೆ ಗ್ಲೂಕೋಸ್‌ ಇರುವಂತೆ ನೋಡಿಕೊಳ್ಳಿ.

ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ: ವ್ಯಾಯಾಮ ಮತ್ತು ಆಹಾರಕ್ರಮದ ಬದಲಾವಣೆಗಳಿಂದ ರಕ್ತದ ಸಕ್ಕರೆ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.

ವೈದ್ಯರ ಸಲಹೆ ಪಾಲಿಸಿ: ಜೀವನಶೈಲಿಯಲ್ಲಿ ಮೇಲೆ ತಿಳಿಸಿದ ಬದಲಾವಣೆಗಳನ್ನು ಮಾಡಿದ ನಂತರವೂ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವ ಸಂಭವವಿರುತ್ತದೆ. ಆ ಸಂದರ್ಭದಲ್ಲಿ, ವೈದ್ಯರು ಸೂಚಿಸುವ ಔಷಧಗಳನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳಿ. ಆ ಔಷಧಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೆ, ಮಗುವಿನ ಆರೋಗ್ಯ ರಕ್ಷಣೆ ಮಾಡುತ್ತವೆ. ಈ ಔಷಧಿಗಳೂ ಕೆಲಸ ಮಾಡದಿದ್ದಲ್ಲಿ, ಇನ್ಸುಲಿನ್‌ ಚುಚ್ಚುಮದ್ದು ತೆಗೆದುಕೊಳ್ಳುವಂತೆ ವೈದ್ಯರು ಶಿಫಾರಸು ಮಾಡಬಹುದು. ಸಾಮಾನ್ಯವಾಗಿ, ಹೆರಿಗೆಯ ನಂತರ ಜಿಡಿಎಂ ಸಮಸ್ಯೆ ಮಾಯವಾಗು­ವುದರಿಂದ, ಇನ್ಸುಲಿನ್‌ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ.

Advertisement

* ಡಾ. ರಾಧಾ ಎಸ್‌. ರಾವ್‌, ಪ್ರಸೂತಿ -ಸ್ತ್ರೀರೋಗ ತಜ್ಞೆ

Advertisement

Udayavani is now on Telegram. Click here to join our channel and stay updated with the latest news.

Next