ಬೆಂಗಳೂರು: ವಿಧಾನಸಭೆಯ ವಜ್ರಮಹೋತ್ಸವದ ಜಂಟಿ ಅಧಿವೇಶನದಲ್ಲಿ ಟಿಪ್ಪು ಸುಲ್ತಾನ್ ಸಾಧನೆ ಹೊಗಳಿ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣಕ್ಕೆ ಮಾಹಿತಿ ಎಲ್ಲಿಂದ ಪಡೆಯಲಾಗಿತ್ತು ಎಂಬುದಕ್ಕೆ ಉತ್ತರ ಸಿಕ್ಕಿದ್ದು, ಕರ್ನಾಟಕ ವಿಧಾನಸಭೆ ಸಚಿವಾಲಯದಿಂದಲೇ ಮಾಹಿತಿ ಸಂಗ್ರಹಿಸಿದ್ದು ಬಯಲಾಗಿದೆ.
ಮಂಗಳೂರು ಮೂಲದ ಪಿ.ಆದಿತ್ಯ ನಾರಾಯಣ ಆರ್‌ಟಿಐ ಮೂಲಕ ಕೇಳಿದ ಮಾಹಿತಿಗೆ ರಾಷ್ಟ್ರಪತಿ ಭವನ ಉತ್ತರ ನೀಡಿದ್ದು, ಕರ್ನಾಟಕ ವಿಧಾನಸಭೆ ಸಚಿವಾಲಯ ಹಾಗೂ ಇತರ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು ಎಂದು ರಾಷ್ಟ್ರಪತಿ ಭವನ ಸ್ಪಷ್ಟಪಡಿಸಿದೆ.
ಅ.25ರಂದು ರಾಷ್ಟ್ರಪತಿ ಜಂಟಿ ಸದನವನ್ನು ಉದ್ದೇಶಿಸಿ ಟಿಪ್ಪು ಸುಲ್ತಾನನ್ನು ಕ್ಷಿಪಣಿ ಜನಕ ಹಾಗೂ ಯುದ್ದದಲ್ಲಿ ವೀರ ಮರಣ ಅಪ್ಪಿದ ಎಂದು ಹೇಳಿದ್ದರು. ಈ ಕುರಿತ ಆರ್‌ಟಿಐ ಪ್ರಶ್ನೆಗೆ ನ.24 ರಂದು ಉತ್ತರ ನೀಡಿದೆ.
ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಮಾಡಿದ್ದ ಭಾಷಣ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ರಾಷ್ಟ್ರಪತಿ ಭಾಷಣವನ್ನೇ ಮುಂದಿಟ್ಟುಕೊಂಡು ಸರಕಾರ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿತ್ತು. ಆ ಸಂದರ್ಭದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಸರಕಾರದಿಂದ ಯಾವುದೇ ಮಾಹಿತಿ ನೀಡಿಲ್ಲ. ಅವರು ತಮಗೆ ಬೇಕಾದ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡಿದ್ದಾರೆ ಎಂದು ಗೊತ್ತಿಲ್ಲ ಎಂದು ಸರಕಾರ ಹೇಳಿಕೊಂಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಷರೀಫ್, ಇತಿಹಾಸ ಗೊತ್ತಿಲ್ಲದವರು ಏನೇನೋ ಮಾತನಾಡುತ್ತಾರೆ. ಯಾರು ಏನೇ ಹೇಳಿದರೂ ಇತಿಹಾಸವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ರಾಷ್ಟ್ರಪತಿಗಳ ಭಾಷಣಕ್ಕೂ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಮಾಹಿತಿ ಎಲ್ಲಿಂದ ಬೇಕಾದರೂ ಪಡೆದಿರಬಹುದು. ಟಿಪ್ಪುವಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿಧಾನಸಭೆಯಲ್ಲಿ ರಾಷ್ಟ್ರಪತಿಗಳು ಮಾಡಿರುವ ಭಾಷಣ ಈಗ ಇತಿಹಾಸ ಸೇರಿದೆ. ಈಗ ಬಿಜೆಪಿಯವರು ಚರಿತ್ರೆಯನ್ನು ಬದಲಾಯಿಸಲು ಹೊರಟಿದ್ದರೆ ಅದನ್ನು ಕೈ ಬಿಡಲಿ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದೆಹಲಿಗೆ ಬಂದು ಭಾಷಣ ಮಾಡಿದ್ದಾರೆ. ಅವರಿಗೆ ಯಾರಾದರೂ ಹೇಳಿಕೊಟ್ಟಿದ್ದಾರಾ, ಬಿಜೆಪಿ ಇಂತಹ ರಾಜಕಾರಣವನ್ನು ಬಿಡಲಿ ಎಂದು ಹೇಳಿದರು.