ನಂಜನಗೂಡು: ಟಿಪ್ಪು ಸುಲ್ತಾನ್ ರಾಷ್ಟ್ರದ ಸ್ವಾಭಿಮಾನದ ಸಂಕೇತ ಎಂದು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಇಂದಿಲ್ಲಿ ಬಣ್ಣಿಸಿದರು. ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಅಪ್ರತಿಮ ದೇಶಭಕ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ. 30ಕ್ಕೂ ಹೆಚ್ಚು ಸರ್ಕಾರಿ ಜಯಂತಿಗಳನ್ನು ಆಚರಿಸುತ್ತಿರುವ ನಮ್ಮಲ್ಲಿ ಟಿಪ್ಪು ಜಯಂತಿಗೆ ಮಾತ್ರ ವಿರೋಧವೇಕೆ ಎಂದು ಟಿಪ್ಪು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.
ಪೊಲೀಸ್ ಸರ್ಪಗಾವಲಿನಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಎಲ್ಲ ಜಯಂತಿಗಳನ್ನು ಎಲ್ಲರೂ ಒಟ್ಟಾಗಿ ಆಚರಿಸುವಂತಾಗಬೇಕು. ಎಲ್ಲಾ ಜಾತಿ, ಧರ್ಮ, ಮತಸ್ಥರೆಲ್ಲರೂ ಸೇರಿ ಐಕ್ಯತೆಯಿಂದ ಸಹಬಾಳ್ವೆ ನಡೆಸಬೇಕು. ಮಹನೀಯರು ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಅವರನ್ನು ಗೌರವಿಸುವುದು ನಮ್ಮೆಲ್ಲರ ಧರ್ಮ ಎಂದು ಹೇಳಿದರು.
ಡಾ.ಪುರುಶೋತ್ತಮ್ ಮಾತನಾಡಿ, ಇತಿಹಾಸವನ್ನು ಬಣ್ಣದ ಕನ್ನಡಿಯಿಂದ ನೋಡಬಾರದು. ಕಾವೇರಿಗೆ ಪ್ರಥಮ ಅಣೆಕಟ್ಟು ಕಟ್ಟಿದ ಕೀರ್ತಿ ಟಿಪ್ಪುವಿಗೆ ಸೇರುತ್ತದೆ. ಮರಾಠರು ಶ್ರಿಂಗೇರಿ ಹಾಗೂ ರಂಗನಾಥ ದೇವಾಲಯವನ್ನು ಲೂಟಿ ಮಾಡಿಲ್ಲವೆ, ಆ ಕಾಲದಲ್ಲಿ ಎಲ್ಲರೂ ಸಂಪತ್ತಿಗಾಗಿ ಲೂಟಿ ಮಾಡಿದವರೆ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯ, ಮೇಲುಕೋಟೆ, ನಂಜನಗೂಡು, ಕಳೆಲೆ ದೇವಾಲಯಗಳಿಗೆ ಪೂಜೆ ಸಲ್ಲಿಸಿ ದತ್ತಿ ಕೊಟ್ಟ ಟಿಪ್ಪು ಹೇಗೆ ಮತಾಂಧ. ರಾಜಕೀಯಕ್ಕಾಗಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ದಯಾನಂದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಪಂ ಸದಸ್ಯೆ ಲತಾ, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ತಾಪಂ ಇಒ ಶ್ರೀಕಂಠರಾಜೇ ಅರಸ್, ಬಿಇಒ ನಾರಾಯಣ್, ಜಾಮಿಯಾ ಮಸೀದಿ ಅಧ್ಯಕ್ಷ ಅಬುxಲ್ ಖಾದರ್, ಅಕºರ್ ಅಲೀಂ, ಶೌಖತ್, ನಗರಸಭಾ ಸದಸ್ಯ ಮಟನ್ ಬಾಬು, ಖಾಲಿದ್, ತಾಪಂ ಉಪಾಧ್ಯಕ್ಷ ಗೋಂದ ರಾಜು, ಸದಸ್ಯ ಮೂಗಶೆಟ್ಟಿ ಉಪಸ್ಥಿತರಿದ್ದರು.
ಗೊಂದಲ ಮಾಡಲಬೇಡಿ – ಶಾಸಕ ಡಾ.ಯತೀಂದ್ರ: ಟಿಪ್ಪು ಜಯಂತಿ ಕಾರ್ಯಕ್ರಮದ ಆರಂಭದಲ್ಲೇ ಜಯಂತಿ ಮೆರವಣಿಗೆ ಬೇಕು ಬೇಡಗಳ ಕುರಿತು ಪೊಲೀಸರು ಹಾಗೂ ಸಮುದಾಯದವರಲ್ಲಿ ಜಟಾಪಟಿ ನಡೆಯಿತು. ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಫ್ರಿದಿಯನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಸಮುದಾಯದವರು ಅಫ್ರಿದಿಯನ್ನು ಬಿಡುಗಡೆ ಮಾಡಿದ ಬಳಿಕವೇ ಸಮಾರಂಭ ನಡೆಸಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಪೊಲೀಸರು, ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಡಾ.ಯತೀಂದ್ರ ಇಬ್ಬರನ್ನು ಸಮಾಧಾನಪಡಿಸಿ ಅಫ್ರಿದಿ ಮೇಳೆ ಪ್ರಕರಣ ದಾಖಲಿಸದಂತೆ, ಬಿಡುಗಡೆ ಮಾಡುವಂತೆ ಸೂಚಿಸಿದರು. ಇತ್ತ ಆತನ ತಾಯಿ ರೇಷ್ಮಾ ಸಹಿತ ಸಮುದಾಯದವರ ಮನವೊಲಿಸಿದರು. ಆ ಬಳಿಕ ಸಮಾರಂಭ ನಡೆಯಿತು.