ಶಹಾಬಾದ: ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮಾತ್ರ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಸರಕಾರದಿಂದ ಆದೇಶ ಬಂದಿದ್ದರಿಂದ ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಯಂತಿ ಆಚರಿಸಕೂಡದು ಎಂದು ಡಿವೈಎಸ್‌ಪಿ ಕೆ.ಬಸವರಾಜ ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಟಿಪ್ಪು ಸುಲ್ತಾನ ಜಯಂತ್ಯುತ್ಸವ ನಿಮಿತ್ತ ಸ್ಥಳೀಯ ಮುಖಂಡರ ಜತೆಗೆ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ಆಯೋಜಿಸಕೂಡದು. ಒಂದು ವೇಳೆ ಆಚರಿಸಿದನ್ನು ಕಂಡರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾವುದೆಂದು ತಿಳಿಸಿದರು. ಕೇವಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಿಸಲು ಸರ್ಕಾರದಿಂದ ಸುತ್ತೋಲೆ ಬಂದಿದ್ದರಿಂದ ಸ್ಥಳೀಯವಾಗಿ ಯಾರೂ ಆಚರಿಸುವಂತಿಲ್ಲ. ಖಾಸಗಿ ವ್ಯಕ್ತಿ ಮತ್ತು
ಸಂಘಟನೆಗಳಿಂದಲೂ ಹೊರಾಂಗಣ ಮತ್ತು ಒಳಾಂಗಣ ಜಯಂತಿ ಆಚರಣೆಗೆ ಅವಕಾಶ ಇರುವುದಿಲ್ಲ ಎಂದು ತಿಳಿದರು.
ಒಂದು ವೇಳೆ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಬೇಕೆಂದರೆ ತಾಲೂಕಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುವ ಜಯಂತಿಯಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಯಾವುದೇ ತಕರಾರು ಇರುವುದಿಲ್ಲ. ಇದನ್ನು ಬಿಟ್ಟು ಸ್ಥಳೀಯವಾಗಿ ಆಚರಣೆಗೆ ಮುಂದಾದರೆ, ಯಾವುದೇ ಮುಲಾಜಿಲ್ಲದೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿಪಿಐ ಅಸ್ಲಾಂ ಭಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ನಗರಸಭೆ ಸದಸ್ಯ ಡಾ| ಅಹ್ಮದ್ ಪಟೇಲ್, ಅಶೋಕ ಮ್ಯಾಗೇರಿ, ಮಸ್ತಾನ್ ಇತರರು ಇದ್ದರು.