Advertisement

ಪೊಲೀಸ್‌ ಭದ್ರಕೋಟೆಯೊಳಗೆ ಟಿಪ್ಪು ಜಯಂತಿ

01:05 PM Nov 11, 2017 | Team Udayavani |

ಮೈಸೂರು: ಪೊಲೀಸರ ಭದ್ರಕೋಟೆ, ಸಿಸಿ ಕ್ಯಾಮರಾಗಳ ಕಣ್ಗಾವಲಿನ ನಡುವೆ ಶುಕ್ರವಾರ ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಟಿಪ್ಪು ಸುಲ್ತಾನ್‌ರ 268ನೇ ದಿನಾಚರಣೆ ನಡೆಯಿತು. ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ಇದ್ದ ಹಿನ್ನೆಲೆಯಲ್ಲಿ ಕಲಾಮಂದಿರದಲ್ಲಿ ಭದ್ರತೆಗಾಗಿ ನೂರಕ್ಕು ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

ಕಲಾಮಂದಿರದ ಪ್ರವೇಶ ದ್ವಾರಗಳಲ್ಲೇ ಬ್ಯಾರಿಕೇಡ್‌ ಹಾಕಿಕೊಂಡು ನಿಂತಿದ್ದ ಪೊಲೀಸರು, ಲೋಹಶೋಧಕ ಯಂತ್ರಗಳ ಮೂಲಕ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡಿದ ನಂತರವೇ ಒಳ ಬಿಟ್ಟರು. ಮತ್ತೆ ಕಲಾಮಂದಿರದ ಮುಖ್ಯ ಪ್ರವೇಶ ದ್ವಾರದಲ್ಲಿ ತಪಾಸಣೆ ಮೂಲಕವೇ ಒಳ ಪ್ರವೇಶಿಸಬೇಕಿತ್ತು.

ಕಂಟ್ರೋಲ್‌ ಯೂನಿಟ್‌: ವಿಶೇಷ ಭದ್ರತೆ ಹಿನ್ನೆಲೆಯಲ್ಲಿ ಕಲಾಮಂದಿರಕ್ಕೆ ಹೆಚ್ಚುವರಿ 16 ಸಿಸಿ ಕ್ಯಾಮರಾ ಅಳವಡಿಸಿ ಕಂಟ್ರೋಲ್‌ ಯೂನಿಟ್‌ಗಳನ್ನು ಸ್ಥಾಪಿಸಲಾಗಿತ್ತು. ಇಬ್ಬರೂ ಡಿಸಿಪಿಗಳು ಅಲ್ಲಿಯೇ ಕುಳಿತು ಕಲಾಮಂದಿರದ ಎಲ್ಲಾ ಕೋನಗಳಿಂದ ಬರುವವರು, ಹೋಗುವವರ ಮೇಲೆ ನಿಗಾ ಇಡುತ್ತಿದ್ದರು.
ಕಾರ್ಯಕ್ರಮದ ವೇದಿಕೆ ಮುಂಭಾಗ ಕೂಡ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ 11.15ಕ್ಕೆ ಬಂದರು. ನಂತರ ಕಾರ್ಯಕ್ರಮ ಆರಂಭಿಸಲಾಯಿತು. ಆರಂಭದಲ್ಲಿ ಕಲಾಮಂದಿರ ಸಭಾಂಗಣ ಖಾಲಿ ಇತ್ತು. ನಂತರ ಗುಂಪು ಗುಂಪಾಗಿ ಘೋಷಣೆ ಕೂಗುತ್ತಾ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಹದೇವಪ್ಪ ಅವರು ಸುಮಾರು 1ಗಂಟೆ ಕಾಲ ವೀರಾವೇಶದಿಂದ ಭಾಷಣ ಮಾಡಿದರು. ಆನಂತರ ಶುಕ್ರವಾರದ ನಮಾಜ್‌ ಹಿನ್ನೆಲೆಯಲ್ಲಿ ಬಹುಪಾಲು ಜನ ಎದ್ದು ಹೋದರು.

ಹೆಸರಿರಲಿಲ್ಲ: ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿ, ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸದಂತೆ ಸಂಸದ ಪ್ರತಾಪ್‌ಸಿಂಹ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿತ್ತು. ಆದರೆ, ಬಿಜೆಪಿಯ ಉಪ ಮೇಯರ್‌ ರತ್ನಲಕ್ಷ್ಮಣ್‌, ಜಿಪಂ ಉಪಾಧ್ಯಕ್ಷ ಜಿ.ನಟರಾಜ್‌ರ ಹೆಸರನ್ನು ಮುದ್ರಿಸಲಾಗಿತ್ತಾದರೂ ಗೈರಾಗಿದ್ದರು. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮದಲ್ಲೂ ತಪ್ಪಿಸಿಕೊಳ್ಳದ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ  ಗೈರು ಹಾಜರಿ ಎದ್ದು ಕಾಣುತ್ತಿತ್ತು.

Advertisement

ಎಂದಿನಂತೆ ಜಿಲ್ಲಾಡಳಿತ ಶಿಷ್ಟಾಚಾರದ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ 29 ಮಂದಿ ಚುನಾಯಿತ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿದ್ದರೂ ಕಾರ್ಯಕ್ರಮಕ್ಕೆ ಬಂದವರು, 10ಮಂದಿ ಮಾತ್ರ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ತನ್ವೀರ್‌ಸೇs… ಕಳುಹಿಸಿದ್ದ ಸಂದೇಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ಓದಿದರು.

Advertisement

Udayavani is now on Telegram. Click here to join our channel and stay updated with the latest news.

Next