Advertisement
ರಾಜ್ಯ ಸರ್ಕಾರದ ವತಿಯಿಂದ ನ.10ರಂದು ಟಿಪ್ಪು ಜಯಂತಿ ಆಚರಿಸಿಯೇ ತೀರುವುದಾಗಿ ಕನ್ನಡ ಮತ್ತು ಸಂಸ್ಖƒತಿ ಇಲಾಖೆ ಸಚಿವೆ ಡಾ.ಜಯಮಾಲಾ ಅವರು ಘೋಷಿಸಿರುವ ಬೆನ್ನಲ್ಲೇ ಇದರ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿರುವ ಬಿಜೆಪಿಯು ಪ್ರತಿರೋಧ ತೋರುವ ಜತೆಗೆ ಜನಾಭಿಪ್ರಾಯ ರೂಪಿಸಲು ಚಿಂತಿಸಿದೆ. ಸಂಘ ಪರಿವಾರವೂ ಯೋಜಿತ ರೀತಿಯಲ್ಲಿ ಪ್ರತಿರೋಧ ಒಡ್ಡಲು ಕಾರ್ಯತಂತ್ರ ರೂಪಿಸುತ್ತಿದೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಮುಳುಗಿದ್ದ ಬಿಜೆಪಿ ನಾಯಕರು ಇದೀಗ ಸರ್ಕಾರದ ವಿರುದ್ಧ ಮತ್ತೂಂದು ಸುತ್ತಿನ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಉಪಚುನಾವಣೆ ಪ್ರಚಾರದ ವೇಳೆಯೂ ಮೈತ್ರಿ ಸರ್ಕಾರದ ವೈಫಲ್ಯಗಳ ಬಗ್ಗೆಯೇ ವ್ಯಾಪಕ ಟೀಕೆ ಮಾಡಿದ್ದ ಬಿಜೆಪಿ ಮುಖಂಡರಿಗೆ ಇದೀಗ ಟಿಪ್ಪು ಜಯಂತಿ ಆಚರಣೆ ವಿವಾದ ಹೋರಾಟಕ್ಕೆ ಹೊಸ “ಅಸ್ತ್ರ’ ನೀಡಿದಂತಾಗಿದೆ. ಹಾಗಾಗಿ ಜನಾಭಿಪ್ರಾಯ ರೂಪಿಸುತ್ತಾ ಹೋರಾಟದ ರೂಪುರೇಷೆ ಹೆಣೆಯುತ್ತಿದೆ. ಸದ್ಯದಲ್ಲೇ ಬಿಜೆಪಿ ಮುಖಂಡರು ಸಭೆ ನಡೆಸಿ ಪ್ರತಿರೋಧದ ರೂಪುರೇಷೆಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಕಾರ್ಯಪ್ರವೃತ್ತರಾಗಲು ನಿರ್ಧರಿಸಿದ್ದಾರೆ. ಉಪಚುನಾವಣೆಗಳ ಫಲಿತಾಂಶ ಪ್ರಕಟವಾದ ಬಳಿಕ ಹೋರಾಟದ ವಿಧಾನ ಅಂತಿಮಗೊಳಿಸಲಿದ್ದಾರೆ.
Related Articles
ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾದಾಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು, ಅಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ಸರ್ಕಾರದಿಂದ ಆಚರಣೆ ಅಗತ್ಯವಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರುವಾಗ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಹಾಗಾಗಿ ಜೆಡಿಎಸ್‌ನ ಇಬ್ಬಂದಿತನ ಹಾಗೂ ಕಾಂಗ್ರೆಸ್‌ನ ಮತೀಯ ಓಲೈಕೆ ರಾಜಕಾರಣದ ಬಗ್ಗೆ ಜನರಿಗೆ ತಿಳಿಸುವ ಮೂಲಕ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬಿಜೆಪಿಯ ಲೆಕ್ಕಾಚಾರ.
Advertisement
ಟಿಪ್ಪು ಜಯಂತಿ ಆಚರಣೆ ಬಹಿಷ್ಕರಿಸಬೇಕೆ ಅಥವಾ ಅದರ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಬೇಕೆ ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಬಿಜೆಪಿ ಶಾಸಕರ ಬಲ ಕಡಿಮೆಯಿದ್ದ ಕಾರಣ ವ್ಯಾಪಕ ಪ್ರತಿರೋಧ ತೋರಲು ಸಾಧ್ಯವಾಗಿರಲಿಲ್ಲ. ಆದರೆ ಈಗ 104 ಶಾಸಕ ಬಲವಿರುವುದರಿಂದ 104 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿರೋಧ ತೋರಿದರೂ ಭಾರಿ ಗದ್ದಲ ಸೃಷ್ಟಿಯಾಗಲಿದೆ. ಹಾಗಾಗಿ ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಭೆ ನಡೆಸಿ ಪಕ್ಷದ ವತಿಯಿಂದ ಹೋರಾಟ ವಿಧಾನವನ್ನು ಅಂತಿಮಗೊಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಂಘ ಪರಿಹಾರದಿಂದ ಹೋರಾಟಕ್ಕೆ ಕರೆಟಿಪ್ಪು ಜಯಂತಿ ಆಚರಣೆ ವಿರುದ್ಧ ನಡೆಸಬೇಕಾದ ಹೋರಾಟ ಕುರಿತಂತೆ ಸಂಘ ಪರಿವಾರವು ಇತ್ತೀಚೆಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದೆ. ವಿಶ್ವ ಹಿಂದೂ ಪರಿಷತ್ ಸೇರಿದಂತೆ ನಾನಾ ಹಿಂದೂಪರ ಸಂಘಟನೆಗಳು, ಬಿಜೆಪಿಯ ಆಯ್ದ ಮುಖಂಡರೊಂದಿಗೆ “ಕೇಶವಕೃಪಾ’ದಲ್ಲಿ ನಡೆದ ಸಭೆಯಲ್ಲಿ ಟಿಪ್ಪು ಜಯಂತಿಗೆ ಪ್ರತಿರೋಧ ಒಡ್ಡಬೇಕಾದ ವಿಧಾನಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಹೋರಾಟ ನಡೆಸಬೇಕು. ಟಿಪ್ಪು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಪ್ರದೇಶಗಳು, ಜಿಲ್ಲೆಯಲ್ಲಿ ತೀವ್ರ ಪ್ರತಿರೋಧ ತೋರಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಮುಖ್ಯವಾಗಿ ಬೆಂಗಳೂರು, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸುವ ಬಗ್ಗೆಯೂ ಮಾತುಕತೆ ನಡೆದಿದೆ. ಸದ್ಯದಲ್ಲೇ ಮತ್ತೂಂದು ಸುತ್ತಿನ ಸಭೆ ನಡೆಸಿ ಹೋರಾಟದ ರೂಪುರೇಷನೆಗಳನ್ನು ಅಂತಿಮಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಈ ಬಗ್ಗೆ ಸದ್ಯದಲ್ಲೇ ನಾಯಕರು ಸಭೆ ನಡೆಸಿ ಆಚರಣೆಯನ್ನು ಯಾವ ರೀತಿಯಲ್ಲಿ ವಿರೋಧಿಸಬೇಕು ಎಂಬ ಬಗ್ಗೆ ಚರ್ಚಿಸಿ ಮುಂದುವರಿಯಲಾಗುವುದು.
– ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ – ಎಂ.ಕೀರ್ತಿಪ್ರಸಾದ್