ಬೆಳಗಾವಿ:ಟಿಪ್ಪು ಸುಲ್ತಾನ್ ನಿಂದಾಗಿ ನಮ್ಮ ಕುಟುಂಬಕ್ಕೆ ತುಂಬಾ ತೊಂದರೆಯಾಗಿತ್ತು. ರಾಜ್ಯ ಸರ್ಕಾರ ಯಾವ ಕಾರಣಕ್ಕೆ ಟಿಪ್ಪು ಜಯಂತಿ ಮಾತ್ರ ಮಾಡುತ್ತಿದೆಯೋ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿ ಬೆಂಬಲಿಸಲ್ಲ. ಹೀಗಾಗಿ ಟಿಪ್ಪು ಜಯಂತಿ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಬುಧವಾರ ಬೆಳಗಾವಿಯ ಕೆಎಲ್ ಇ ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ಆರಂಭಿಸಿರುವ ಫಿಸಿಯೋಥೆರಪಿ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಬಗ್ಗೆ ಏನೂ ಮಾತನಾಡಲ್ಲ. ಅದು ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ಆದರೆ ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ತುಂಬಾ ತೊಂದರೆಯಾಗಿತ್ತು ಎಂದರು.
ಇದರ ಬಗ್ಗೆ ಹೆಚ್ಚು ಹೇಳೋಕೆ ಇಷ್ಟ ಪಡಲ್ಲ. ಟಿಪ್ಪು ಜಯಂತಿ ಕುರಿತಂತೆ ಪರ ಅಥವಾ ವಿರೋಧದ ನಿಲುವು ತಾಳಲ್ಲ. ಟಿಪ್ಪುವಿನಿಂದ ಸಾಕಷ್ಟು ಅನ್ಯಾಯ, ದಾಳಿ ನಡೆದಿದೆ. ಈಗ ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದು ಹೇಳಿದರು.
ತಾನು ಯಾವುದೇ ಕಾರಣಕ್ಕೂ ರಾಜಕೀಯ ರಂಗ ಪ್ರವೇಶ ಮಾಡವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನಕಲ್ಯಾಣಕ್ಕೆ ರಾಜಕೀಯ ಅನಿವಾರ್ಯವಲ್ಲ, ರಾಜಕಾರಣದಿಂದ ದೂರ ಇದ್ದು ಜನಸೇವೆ ಮಾಡಬಹುದು ಎಂದು ತಿಳಿಸಿದರು.