Advertisement

ಟಿಪ್ಪು ಇನ್ನೊಂದು ಮುಖ ಸೇರ್ಪಡೆಗೆ ಸಮಿತಿ

10:27 AM Jan 22, 2020 | Lakshmi GovindaRaj |

ಬೆಂಗಳೂರು: ಶಾಲಾಮಕ್ಕಳ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್‌ ಕುರಿತಾದ ನಕಾರಾತ್ಮಕ ಅಂಶಗಳನ್ನು ಸೇರಿಸುವ ಕುರಿತು ವಿಸ್ತೃತ ಚರ್ಚೆಗಾಗಿ ಇನ್ನೊಂದು ಸಮಿತಿ ರಚನೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಟಿಪ್ಪು ಸುಲ್ತಾನ್‌ ಚರಿತ್ರೆಯ ನಕಾರಾತ್ಮಕ ಅಂಶಗಳು, ಘಟನೆಗಳು ಹಾಗೂ ಹಿಂಸಾತ್ಮಕ ಕೃತ್ಯಗಳನ್ನು ವಿಸ್ತೃತವಾಗಿ ತಿಳಿಯುವುದಕ್ಕಾಗಿ ಮತ್ತೂಂದು ಸಮಿತಿ ರಚನೆ ಮಾಡಲಾಗುವುದು. ಶಾಲಾ ಪಠ್ಯದಲ್ಲಿ ಟಿಪ್ಪುವಿನ ಸಕಾರಾತ್ಮಕ ಅಂಶಗಳು ಹಾಗೂ ಮೈಸೂರು ಪ್ರಾಂತ್ಯದ ಇತಿಹಾಸವನ್ನು ಮಾತ್ರ ಹೇಳಲಾಗಿದೆ. ಹಾಗಾಗಿ, ನಕಾರಾತ್ಮಕ ವಿಷಯಗಳನ್ನು ಕೂಡ ತಿಳಿಯಲು ಸದ್ಯದಲ್ಲಿಯೇ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಟಿಪ್ಪು ಸುಲ್ತಾನ್‌ ಮಂಡ್ಯದ ಮೇಲುಕೋಟೆ, ಚಿತ್ರದುರ್ಗ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಕಷ್ಟು ಹಿಂಸಾತ್ಮಕ ಕೃತ್ಯಗಳನ್ನು ಎಸಗಿದ್ದಾನೆ ಎನ್ನಲಾಗಿದೆ. ಇದನ್ನು ಪರಿಪೂರ್ಣವಾಗಿ ತಿಳಿಯುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಈಗ ರಚಿಸಿರುವ ಸಮಿತಿ ಕೂಡ ಇದೇ ರೀತಿಯ ಶಿಫಾರಸ್ಸನ್ನು ನೀಡಿದೆ. ನಕಾರಾತ್ಮಕ ಅಂಶಗಳನ್ನು ಚರ್ಚಿಸುವ ಸಂಬಂಧ ಬೇರೊಂದು ಸಮಿತಿ ರಚಿಸಲು ಶಿಫಾರಸು ಮಾಡಿರು ವುದರಿಂದ ಈ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದರು.

ಟಿಪ್ಪುಸುಲ್ತಾನ್‌ ಕುರಿತಾದ ಪಠ್ಯದ ಬಗ್ಗೆ ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್‌ ಅವರು ಪತ್ರದ ಮೂಲಕ ತಿಳಿಸಿದ್ದರು. ಅದರಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ (ಡಿಎಸ್‌ಇಆರ್‌ಟಿ) ಇಲಾಖೆಯ ಮೂಲಕ ತಜ್ಞರ ಸಮಿತಿಯನ್ನು ರಚಿಸಿ, ವರದಿ ನೀಡುವಂತೆಯೂ ನಿರ್ದೇಶಿಸಲಾಗಿದೆ. ಅದರಂತೆ ತಜ್ಞರ ಸಮಿತಿಯು ಡಿಎಸ್‌ಇಆರ್‌ಟಿ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದೆ.

ಅಪ್ಪಚ್ಚು ರಂಜನ್‌ ತಿಳಿಸಿರುವ ಯಾವುದೇ ವಿಷಯಗಳು ಪಠ್ಯದಲ್ಲಿಲ್ಲ. ಅಲ್ಲದೆ, ಟಿಪ್ಪು ವಿಷಯವನ್ನು ಪಠ್ಯದಿಂದ ತೆರವು ಮಾಡಿದರೆ, ಮೈಸೂರು ಪ್ರಾಂತ್ಯದ ಆಡಳಿತ ತಿಳಿಸುವ ಟಿಪ್ಪು ಆಡಳಿತಾವಧಿಯಾದ 1783ರಿಂದ 1799ರ ವರೆಗಿನ ಮೈಸೂರು ಇತಿಹಾಸ ಹಾಗೂ ಬ್ರಿಟಿಷರ ವಿರುದ್ಧ ಮೈಸೂರು ಯುದ್ದಗಳ ವಿಶ್ಲೇಷಣೆಯಲ್ಲಿ ಇತಿಹಾಸದ ಕೊಂಡಿ ಕಳಚಿದಂತಾಗಲಿದೆ.

Advertisement

ಈ ಹಿನ್ನೆಲೆಯಲ್ಲಿ ಟಿಪ್ಪು ಪಠ್ಯ ಮುಂದುವರಿಸಬೇಕು ಎಂದು ವರದಿ ನೀಡಿತ್ತು. 6,7 ಮತ್ತು 10ನೇ ತರಗತಿಯ ಪಠ್ಯಗಳಲ್ಲಿ ಮೈಸೂರು ಯುದ್ಧ ಹಾಗೂ ಟಿಪ್ಪುವಿನ ಪರಿಚಯ ಮಾತ್ರ ನೀಡಲಾಗಿದೆ. ಸಂಪೂರ್ಣ ವಿಷಯಗಳು ಅವಶ್ಯವೆನಿಸಿದರೆ ವಿಸ್ತೃತವಾಗಿ ಉನ್ನತ ಶಿಕ್ಷಣದಲ್ಲಿ ತಿಳಿಸಬಹುದು ಎಂದು ಹೇಳಿತ್ತು ಎಂದರು.

ವಿವಾದದ ಹುಟ್ಟು: ಟಿಪ್ಪು ಬಗ್ಗೆ ವೈಭವೀಕರಿಸಿ ಮಕ್ಕಳಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಟಿಪ್ಪು ದೇಶ ಭಕ್ತನಲ್ಲ, ಕನ್ನಡ ಪ್ರೇಮಿಯಲ್ಲ. ಹೀಗಾಗಿ, ಮಕ್ಕಳ ಪಠ್ಯದಲ್ಲಿ ಟಿಪ್ಪುವಿನ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ. ಮತ್ತೂಂದು ಮುಖವನ್ನು ಕೂಡ ತೋರಿಸಬೇಕು.

ಒಂದು ವೇಳೆ, ಟಿಪ್ಪುವಿನ ನಕಾರಾತ್ಮಕ ವಿಷಯಗಳನ್ನು ತಿಳಿಸಲು ಸಾಧ್ಯವಾಗದಿದ್ದರೆ, ಪಠ್ಯದಿಂದಲೇ ಟಿಪ್ಪು ಪಾಠವನ್ನು ತೆಗೆಯಬೇಕು ಎಂದು ಬಿಜೆಪಿ ಸರ್ಕಾರ ರಚನೆಯಾದ ಆರಂಭದಲ್ಲಿ ಹಿರಿಯ ಶಾಸಕ ಅಪ್ಪಚ್ಚು ರಂಜನ್‌ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಪೂರ್ಣ ವರದಿ ನೀಡುವಂತೆ ಡಿಎಸ್‌ಇಆರ್‌ಟಿಗೆ ಸಚಿವರು ನಿರ್ದೇಶಿಸಿದ್ದರು. ತಜ್ಞರ ಸಮಿತಿ ಈಗ ವರದಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.