ಮೊಳಕಾಲ್ಮೂರು: ಇಂದಿನಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದ್ದ ಸಂಸದ ಶ್ರೀರಾಮುಲು ಅವರಿಗೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಚಳ್ಳಕೆರೆಯ ನಾಯಕನ ಹಟ್ಟಿ ದೇಗುಲದ ಬಳಿ ಶ್ರೀರಾಮುಲು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು ಕಾರಿನ ಗಾಜು ಪುಡಿ ಪುಡಿಯಾಗಿದೆ.
ಶ್ರೀರಾಮುಲು ಅವರು ಭಾರೀ ಭದ್ರತೆಯೊಂದಿಗೆ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ. ದೇಗುಲದ ಬಳಿ ನೂರಾರು ತಿಪ್ಪೇಸ್ವಾಮಿ ಬೆಂಬಲಿಗರು ಜಮಾವಣೆ ಗೊಂಡಿದ್ದು ಧಿಕ್ಕಾರಗಳನ್ನು ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಮೊಳಕಾಲ್ಮೂರಿನಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ತಿಪ್ಪೇಸ್ವಾಮಿ ಬೆಂಬಲಗಿರು ಶ್ರೀರಾಮುಲು ಅವರ ಬೆಂಬಲಕ್ಕೆ ನಿಂತ ಬಿಜೆಪಿ ತಾಲೂಕು ಕಾರ್ಯದರ್ಶಿ ವೆಂಕಟ ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಿಪ್ಪೇಸ್ವಾಮಿ ಬೆಂಬಲಿಗರು ಮತ್ತು ವೆಂಕಸ್ವಾಮಿ ಬೆಂಬಲಿತ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಸ್ಥಳದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ.
ತಿಪ್ಪೇಸ್ವಾಮಿ ಬೆಂಬಲಿಗರು ‘ಗೋ ಬ್ಯಾಕ್ ಶ್ರೀರಾಮುಲು’ ಎಂಬ ಘೋಷಣೆ ಕೂಗುತ್ತಿದ್ದಾರೆ. ಶ್ರೀರಾಮುಲು ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರು ಬೀದಿಗಿಳಿದು ತಿಪ್ಪೇಸ್ವಾಮಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಹಲವರು ಚಪ್ಪಲಿ ತೂರಾಟ ಮಾಡಿದ್ದು, ಪೊರಕೆಗಳನ್ನುಪ್ರದರ್ಶಿಸಿದ್ದಾರೆ.
ನಾನು ತಿಪ್ಪೇಸ್ವಾಮಿಯನ್ನು ಭೇಟಿ ಮಾಡಿಲ್ಲ
ಶಾಸಕ ಆಪ್ತ ತಿಪ್ಪೇಸ್ವಾಮಿಯನ್ನು ಭೇಟಿಯಾಗಿ ಮನವೊಲಿಸುತ್ತೇನೆ ಎಂದಿದ್ದ ಶ್ರೀರಾಮುಲು ಅವರು ‘ನಾನು ತಿಪ್ಪೇಸ್ವಾಮಿ ಅವರನ್ನು ಭೇಟಿಯಾಗಿಲ್ಲ. ಅವರನ್ನು ಸಮಾಧಾನ ಮಾಡುವ ಪ್ರಶ್ನೆಯೇ ಇಲ್ಲ.
ಚುನಾವಣೆಯನ್ನು ಎದುರಿಸುತ್ತೇನೆ, ಗೆಲ್ಲತ್ತೇನೆ ಎನ್ನುವ ವಿಶ್ವಾಸ ನನ್ನದು. ಶ್ರೀರಾಮುಲುವನ್ನು ಓಡಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡಿದೆ. ನಾನು ಸೌಮ್ಯ ವ್ಯಕ್ತಿಯಲ್ಲ, ಹಠವಾದಿ’ ಎಂದರು.
ಇದೀಗ ಮೊಳಕಾಲ್ಮೂರಿನಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ವೇದಿಕೆ ನಿರ್ಮಾಣವಾಗಿದೆ.
25 ಮಂದಿ ವಶಕ್ಕೆ
ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ 25 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.