Advertisement

ಟಿಪ್ಪರ್‌ ಪ್ರಯಾಣವೇ ಇಲ್ಲಿ ‘ಟಾಪ್‌’

04:54 PM May 12, 2019 | Team Udayavani |

ಕುಕನೂರು: ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರ ಸಂಚಾರ ಅಪರಾಧ. ಸರಕು ಸಾಗಾಣಿಕೆ ವಾಹನಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರು ಸೇರಿದಂತೆ ಶಾಲಾ ಮಕ್ಕಳು, ಕಾರ್ಮಿಕರು ಸಂಚರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್‌ ಇತ್ತೀಚೆಗೆ ನಡೆದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರೂ ಇಲ್ಲಿ ಕಾರ್ಮಿಕರನ್ನು ಸರಕು ಸಾಗಾಣಿಕೆ ವಾಹನದಲ್ಲೇ ಸಾಗಿಸುತ್ತಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

Advertisement

ಹೌದು. ಇಲ್ಲಿಯ ಕೆಲವು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರನ್ನು ಟಿಪ್ಪರ್‌ನಲ್ಲೇ ಕರೆದುಕೊಂಡು ಹೋಗಲಾಗುತ್ತಿದೆ. ಸೂಪರ್‌ವೈಜರ್‌ ಹಾಗೂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಂಚರಿಸಲು ಬಸ್‌ ಸೌಲಭ್ಯ ಇದೆ. ಆದರೆ ಕೂಲಿ ಕಾರ್ಮಿಕರಿಗೆ ಸಂಚರಿಸಲು ಯಾವುದೇ ರೀತಿಯ ಬಸ್‌ ಹಾಗೂ ಟ್ಯಾಕ್ಸಿಗಳು ಇಲ್ಲದಿರುವುದು ಆಶ್ಚರ್ಯ ಸಂಗತಿ. ಬೆಳಗ್ಗೆ ತಡವಾಗಿ ಕಾರ್ಮಿಕರನ್ನು ಕರೆದುಕೊಂಡು ಹೋದರೆ ಎಲ್ಲಿ ಸಮಸ್ಯೆಯಾಗುತ್ತದೆ ಎನ್ನುವ ಉದ್ದೇಶದಿಂದ ಪ್ರತಿದಿನ ಬೆಳಿಗ್ಗೆ 5-30 ರಿಂದ 6 ಗಂಟೆಯೊಳಗೇ ಕಾರ್ಮಿಕರನ್ನು ಕಂಪನಿಯ ಟಿಪ್ಪರ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಉಳಿದವರನ್ನು 8 ಗಂಟೆ ಸುಮಾರಿಗೆ ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತದೆ.

ಇದು ತಾಲೂಕಿನಲ್ಲಿ ಕೆಲಸ ಆರಂಭ ಆದಾಗಿನಿಂದಲೂ ಇದೇ ಪರಿಸ್ಥಿತಿ ಇದೆ. ಈ ವಿಷಯವಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್‌, ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಈ ತರಹದ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಳ್ಳದಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ನಮ್ಮ ಅಧಿಕಾರಿಗಳು ತಾಲೂಕಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಗಮನಕ್ಕೆ ಬಂದ ಕೂಡಲೇ ಸ್ಥಳದಲ್ಲೇ ದಂಡ ವಿಧಿಸುತ್ತಾರೆ. ಯಲಬುರ್ಗಾ, ಕುಕನೂರು ತಾಲೂಕಿನಲ್ಲಿರುವ ಪ್ರಕರಣಗಳ ಬಗ್ಗೆ ನನಗೆ ತಿಳಿದಿಲ್ಲ. ಜಿಲ್ಲೆಯಲ್ಲಿ 54 ಪ್ರಕರಣಗಳು ದಾಖಲಾಗಿವೆ.
•ನೂರಮಹಮ್ಮದ ಬಾಷಾ, ಪ್ರಾದೇಶಿಕ ಸಾರಿಗೆ ಅಧಿಕಾರಿ 
ಗೂಡ್ಸ್‌ ವಾಹನದಲ್ಲಿ ಕಾರ್ಮಿಕರನ್ನು ಸಾಗಾಟ ಮಾಡುವುದು ತಾಲೂಕಿನ ಜ್ವಲಂತ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಇಲಾಖೆ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಆದರೂ ಇಂತಹ ಪ್ರಕರಣಗಳು ಕಂಡು ಬಂದರೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುತ್ತೇನೆ.
•ಚಂದ್ರಶೇಖರ, ಕಾರ್ಮಿಕ ಇಲಾಖೆ ಅಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next