Advertisement

ಮರಳು: ಟಿಪ್ಪರ್‌ ಮುಷ್ಕರ 4ನೇ ದಿನಕ್ಕೆ

11:14 AM Oct 22, 2018 | Team Udayavani |

ಕುಂದಾಪುರ: ಮರಳು ನೀತಿಯನ್ನು ಸಡಿಲಗೊಳಿಸಿ ತತ್‌ಕ್ಷಣದಿಂದ ಉಡುಪಿ ಜಿಲ್ಲೆಯಲ್ಲಿ ಮರಳು ತೆಗೆಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಟಿಪ್ಪರ್‌ ಮಾಲಕರ ಸಂಘ ಜಿಲ್ಲೆಯಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಯಶಸ್ವಿಯಾಗಿ ನಾಲ್ಕನೇ ದಿನ ಪೂರೈಸಿದೆ. ರವಿವಾರ ಕೋಟೇಶ್ವರಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿದರು.

Advertisement

ಕೋಟೇಶ್ವರದ ಹೆದ್ದಾರಿ ಬದಿಯಲ್ಲಿ ಟಿಪ್ಪರ್‌ಗಳನ್ನು ನಿಲ್ಲಿಸಿ ಮುಷ್ಕರ ನಡೆಸುತ್ತಿರುವ ಟಿಪ್ಪರ್‌ ಮಾಲಕರ ಸಮಸ್ಯೆಗಳನ್ನು ಸಚಿವೆ ಆಲಿಸಿದರು. ಜಿಲ್ಲಾಡಳಿತವು ಮರಳು ತೆಗೆಯಲು ಅನುಮತಿ ನೀಡದ ಕಾರಣ ಅನೇಕ ಮಂದಿ ತೊಂದರೆಗೊಳಗಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಾರ್ಯ ಗಳಿಗೂ ತೊಡಕಾಗಿದೆ. ಜನಾಭಿ ಪ್ರಾಯಕ್ಕೆ ಮನ್ನಣೆ ಕೊಡದ ಜಿಲ್ಲಾಧಿಕಾರಿಯವರನ್ನು ಕೂಡಲೇ ವರ್ಗಾವಣೆ ಮಾಡಿ, ಬೇರೆ ಒಳ್ಳೆಯ ಜಿಲ್ಲಾಧಿಕಾರಿಯನ್ನು ಕೊಡಿ ಎಂದು ಟಿಪ್ಪರ್‌ ಮಾಲಕರು ಆಗ್ರಹಿಸಿದರು.

ಪರಿಸ್ಥಿತಿ ಹೀಗೇ ಮುಂದುವರಿದರೆ ಕೂಲಿ ಕಾರ್ಮಿಕರ ಸಹಿತ ಅನೇಕರು ಕೆಲಸವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ಕೂಡಲೇ ಮರಳು ತೆಗೆಯಲು ಅನುಮತಿ ಕೊಡಿ ಎನ್ನುವ ಆಗ್ರಹ ಕೇಳಿ ಬಂತು.

ತತ್‌ಕ್ಷಣದಿಂದ ಆರಂಭಕ್ಕೆ ಯತ್ನ
ಮುಷ್ಕರ ನಿರತರ ಸಮಸ್ಯೆ ಆಲಿಸಿದ ಬಳಿಕ ಸಚಿವರು ಮಾತನಾಡಿ, ಈ ಸಂಬಂಧ ಸರಕಾರದ ಮಟ್ಟದಲ್ಲಿ ನಿರಂತರ ಮಾತುಕತೆಯಾಗುತ್ತಿದೆ. ಸೋಮವಾರವೇ (ಅ. 22ರಂದು) ಜಿಲ್ಲಾಧಿಕಾರಿಯವರನ್ನು ಖುದ್ದಾಗಿ ಭೇಟಿಯಾಗಿ ಸಿಆರ್‌ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ಎರಡರಲ್ಲೂ ಮರಳು ತೆಗೆಯಲು ಅನುಮತಿ ನೀಡುವಂತೆ ಸೂಚಿಸುತ್ತೇನೆ ಎಂದು ಜಯಮಾಲಾ ಭರವಸೆ ನೀಡಿದರು. ಮರಳುಗಾರಿಕೆಗೆ ಕಾನೂನು ತೊಡಕುಗಳಿದ್ದು, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಟಿಪ್ಪರ್‌ ಚಾಲಕ-ಮಾಲಕರ ಸಂಘದ ತಾಲೂಕು ಅಧ್ಯಕ್ಷ ಗುಣಕರ ಶೆಟ್ಟಿ, ಸಂಘದ ಸದಸ್ಯರಾದ ಶರತ್‌ ಕುಮಾರ್‌ ಶೆಟ್ಟಿ, ನಿತ್ಯಾನಂದ ಕೋಟೇಶ್ವರ, ಭೋಜ ಪೂಜಾರಿ, ವಾಸು ಶೇರುಗಾರ್‌ ಗಂಗೊಳ್ಳಿ ಸಹಿತ ನೂರಾರು ಮಂದಿ ಹೋರಾಟದಲ್ಲಿ ಭಾಗಿಯಾಗಿದ್ದರು.

Advertisement

ಕುಂದಾಪುರ ತಾಲೂಕು ಟಿಪ್ಪರ್‌ ಮಾಲಕರ ಸಂಘವು ಕುಂದಾಪುರ, ಕೋಟೇಶ್ವರ, ಹೆಮ್ಮಾಡಿ, ಶಂಕರ ನಾರಾಯಣ ಸಹಿತ ಅನೇಕ ಕಡೆ ಗಳಲ್ಲಿ ಮುಷ್ಕರಕ್ಕೆ ಕರೆ ನೀಡಿತ್ತು. ಅ. 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದ್ದು, ಹೆಮ್ಮಾಡಿ, ಕೋಟ, ಬೆಳ್ಮಣ್‌, ಹೆಬ್ರಿ ಮುಂತಾದೆಡೆ ಹೆದ್ದಾರಿಗಳಲ್ಲಿ ಟಿಪ್ಪರ್‌ ನಿಲ್ಲಿಸಿ ಮಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಳಿಕ ಸಚಿವರು ಹೆಮ್ಮಾಡಿಯಲ್ಲಿಯೂ ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನೆ ಕೈಬಿಡುವಂತೆ ಅವರು ಮನವಿ ಮಾಡಿದ್ದಾರೆ.

ಮರಳುಗಾರಿಕೆ: ಪ್ರಕ್ರಿಯೆ ಚುರುಕು
ಉಡುಪಿ: ಮರಳುಗಾರಿಕೆ ಆರಂಭಿಸುವ ಪ್ರಕ್ರಿಯೆಯನ್ನು ಇಲಾಖೆ ಚುರುಕುಗೊಳಿಸಿದೆ. ಉಡುಪಿ ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಮರಳು ತೆಗೆಯಲು ಪರವಾನಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. 2018-19ನೇ ಸಾಲಿನ ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ (ಸಿಆರ್‌ಝಡ್‌) ಗುರುತಿಸಲಾಗಿರುವ ಮರಳು ದಿಬ್ಬಗಳಿಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಅನುಮೋದನೆ ದೊರೆತಿದೆ.

ಮರಳು ದಿಬ್ಬಗಳ ಪಟ್ಟಿಯನ್ನು ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯವರ ಕಚೇರಿಯ ನಾಮಫ‌ಲಕದಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ಅರ್ಹ ಪರವಾನಿಗೆದಾರರ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ.

ಆಸಕ್ತರು ಕಚೇರಿ ಸಮಯದಲ್ಲಿ ಸಂಪರ್ಕಿಸಿ ಅ. 27ರ ಸಂಜೆ 5ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಲ್ಲದೆ 2011ರ ಪೂರ್ವದಲ್ಲಿ ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನಲ್ಲಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಿಂದ ಮರಳುಗಾರಿಕೆ ಪರವಾನಿಗೆ ಪಡೆದುಕೊಂಡಿರುವ ಬಗ್ಗೆ ಪರವಾನಿಗೆಯ ದಾಖಲಾತಿಗಳನ್ನು ಹೊಂದಿರುವವರು ಕೂಡ ಅರ್ಜಿ ಸಲ್ಲಿಸಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯವರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next