ಗುಂಡ್ಲುಪೇಟೆ: ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಅಧಿಕ ಭಾರ ಹೊತ್ತ ಟಿಪ್ಪರ್ ಲಾರಿಗಳು ಹಗಲು, ರಾತ್ರಿ ಎನ್ನದೆ ಎಗ್ಗಿಲ್ಲದೆ ಸಂಚಾರ ಮಾಡುತ್ತಿದ್ದು, ಇಂತಹ ಅಕ್ರಮಕ್ಕೆ ನೂತನ ಶಾಸಕ ಎಚ್.ಎಂ.ಗಣೇಶಪ್ರಸಾದ್ ಕಡಿವಾಣ ಹಾಕಬೇಕೆಂದು ಸಾರ್ವನಿಕರು ಒತ್ತಾಯಿಸಿದ್ದಾರೆ.
ತಾಲೂಕಿನ ತೆರಕಣಾಂಬಿ, ಗುಂಡ್ಲುಪೇಟೆ, ಬೇಗೂರು ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ನಿಗಧಿಗಿಂತಲೂ ಅಧಿಕ ಭಾರ ಹೊತ್ತ ಟಿಪ್ಪರ್ ಲಾರಿಗಳು ಸಂಚಾರ ಮಾಡುತ್ತಿದೆ. ಹೀಗಿದ್ದರೂ ಕೂಡ ಆಯಾಯ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಪೊಲೀಸರ ಕುಮ್ಮಕ್ಕಿನಿಂದಲೇ ಟಿಪ್ಪರ್‌ಗಳು ಸಂಚಾರ ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೆಪ ಮಾತ್ರಕ್ಕೆ ಆರ್‌ಟಿಒ ಕಚೇರಿ: ಟಿಪ್ಪರ್ ಲಾರಿಯಲ್ಲಿ ಇಂತಿಷ್ಟು ಟನ್ ಹಾಕಿಕೊಂಡು ಸಂಚಾರ ಮಾಡಬೇಕು ಎಂಬ ನಿಯಮವಿದೆ. ಆದರೆ ಲಾರಿ ಮಾಲೀಕರು ಹಾಗೂ ಚಾಲಕರು ನಿಗದಿಗಿಂತಲೂ ಅಧಿಕ ಕಲ್ಲುಗಳನ್ನು ತುಂಬಿಕೊಂಡು ಕೂತನೂರು ರಸ್ತೆ, ಮಡಹಳ್ಳಿ ರಸ್ತೆ, ತೆರಕಣಾಂಬಿ ರಸ್ತೆ ಮಾರ್ಗವಾಗಿ ಪಟ್ಟಣದ ಆರ್‌ಟಿಓ ಕಚೇರಿ ಮುಂದೆ ಸಂಚಾರ ಮಾಡುತ್ತಿದ್ದಾರೆ. ಹೀಗಿದ್ದರೂ ಸಹ ಆರ್‌ಟಿಒ ಅಧಿಕಾರಿಗಳು ತಪಾಸಣೆಗೆ ಮಾತ್ರ ಮುಂದಾಗುತ್ತಿಲ್ಲ. ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಕೇಳಿ ಬಂದ ಸಂದರ್ಭದಲ್ಲಿ ಆಗೊಮ್ಮೆ ಈಗೊಮ್ಮೆ ಎಂದು ನೆಪ ಮಾತ್ರಕ್ಕೆ ಬೆರಳೆಣಿಗೆಯಷ್ಟು ವಾಹನಗಳನ್ನು ತಪಾಸಣೆ ಮಾಡಿ ಸುಮ್ಮನಾಗುತ್ತಿದ್ದಾರೆ.
ಹಿಂಬದಿ ಬೈಕ್ ಸಂಚಾರ ದುಸ್ತರ: ಅಧಿಕ ಭಾರಹೊತ್ತು ಟಿಪ್ಪರ್ ಲಾರಿಗಳು ರಸ್ತೆಯಲ್ಲಿ ಸುರಕ್ಷತಾ ನಿಯಮದ ಪ್ರಕಾರ ಟಾರ್ಪಲ್ ಹಾಕಿಕೊಂಡು ಸಂಚಾರ ಮಾಡದೆ ಅತೀ ವೇಗದಿಂದ ತೆರಳುವ ಕಾರಣ ಹಿಂಬದಿಯಲ್ಲಿ ಬರುವ ಬೈಕ್, ಸೈಕಲ್ ಸೇರಿ ದಂತೆ ಸಣ್ಣ ವಾಹನ ಸವಾರರ ಕಣ್ಣಿಗೆ ಲಾರಿಯಿಂದ ಕಲ್ಲಿ ಧೂಳು ಕಣ್ಣಿಗೆ ಬೀಳುತ್ತಿವೆ. ಇದರ ಅರಿವಿದ್ದರೂ ಸಹ ಚಾಲಕರು ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋವಾಗಿದೆ.
ಅಧಿಕ ಭಾರಹೊತ್ತ ಟಿಪ್ಪರ್‌ಗಳು ಹೆದ್ದಾರಿ ಮಾರ್ಗವಾಗಿ ನಿರಂತರವಾಗಿ ಎಗ್ಗಿಲ್ಲದೆ ಸಂಚಾರ ಮಾಡುತ್ತಿವೆ. ಇದರ ಬಗ್ಗೆ ಹಿಂದೆ ಇದ್ದ ಶಾಸಕರು ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ಧೋರಣೆ ತಾಳಿದರು. ಇದರಿಂದ ಜನರಿಗೂ ಕೂಡ ತೊಂದರೆ ಉಂಟಾಗುತ್ತಿತ್ತು. ಈಗ ನೂತನವಾಗಿ ಆಯ್ಕೆಯಾಗಿರುವ ಶಾಸಕ ಎಚ್.ಎಂ.ಗಣೇಶಪ್ರಸಾದ್ ಟಿಪ್ಪರ್ ಲಾರಿಗಳ ಹಾವಳಿಗೆ ಕಡಿವಾಣ ಹಾಕಬೇಕು.
– ಅಬ್ದುಲ್ ಮಾಲೀಕ್, ಕಾವಲು ಪಡೆ ತಾಲೂಕು ಅಧ್ಯಕ್ಷ
ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಅಧಿಕ ಭಾರ ಹೊತ್ತ ಟಿಪ್ಪರ್ ಲಾರಿಗಳು ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಕುಮ್ಮಕ್ಕಿ ನಿಂದಲೇ ಸಂಚಾರ ಮಾಡುತ್ತಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವ ಮೂಲಕ ನೂತನ ಶಾಸಕರು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
-ರಾಜಗೋಪಾಲ್, ಪುರಸಭೆ ಸದಸ್ಯ
– ಬಸವರಾಜು ಎಸ್.ಹಂಗಳ