ತಿಪಟೂರು: ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಬೇಜವಾಬ್ದಾರಿಯೋ ತಿಳಿಯುತ್ತಿಲ್ಲ. ಇತ್ತೀಚೆಗಂತೂ ನಗರದೆಲ್ಲೆಡೆ ಪೆಟ್ಟಿಗೆ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು ಪಾದಚಾರಿ ಜಾಗವನ್ನೂ ಬಿಡದೆ ಆವರಿಸಿಕೊಂಡಿವೆ.
ಇದರಿಂದಾಗಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಕುತ್ತುಂಟಾಗಿದ್ದರೆ, ಮತ್ತೂಂದೆಡೆ ನಗರದ ಶುಚಿತ್ವ, ಅಂದ ಹಾಳಾಗುತ್ತಿದೆ. ನಗರದಲ್ಲಿ ಯಾವ ರಸ್ತೆಗಳನ್ನು ನೋಡಿದರೂ, ಯಾವ ಸರ್ಕಲ್‌ಗಳನ್ನು ನೋಡಿದರೂ ಪೆಟ್ಟಿಗೆ ಅಂಗಡಿಗಳದ್ದೇ ಸಾಮ್ರಾಜ್ಯ. ಇವುಗಳ ಹಾವಳಿ ಎಷ್ಟಿದೆ ಎಂದರೆ ಪ್ರತಿ ದಿನ ನಗರದಲ್ಲಿ ಹೊಸದಾಗಿ 2-3 ಪೆಟ್ಟಿಗೆ ಅಂಗಡಿಗಳಾದರೂ ತಲೆ ಎತ್ತುತ್ತವೆ. ನಗರಸಭೆ ಸೇರಿ ಇತರೆ ಇಲಾಖೆ ಗಳಿಗೆ ಸೇರಿರುವ ಜಾಗಗಳನ್ನೆಲ್ಲಾ ಆವರಿಸಿಕೊಂಡಿವೆ.
.
ಬಾಡಿಗೆ ಪೆಟ್ಟಿಗೆ ಅಂಗಡಿಗಳು: ಇತ್ತೀಚಿನ 2-3 ವರ್ಷಗಳಿಂದ ಹಣಬಲ ಇರುವವರು ಬಂಡವಾಳ ಹಾಕಿ ದೊಡ್ಡ ದೊಡ್ಡ ಪೆಟ್ಟಿಗೆ ಅಂಗಡಿಗಳನ್ನು ಮಾಡಿಸಿ ರಸ್ತೆ ಬದಿಯ, ಇಲಾಖೆಗಳ ಅಕ್ಕಪಕ್ಕ ಸರ್ಕಾರಿ ಜಾಗಗಳಲ್ಲಿಟ್ಟು ದಿನವಹಿ 300ರಿಂದ 500ರವರೆಗೆ ಬಾಡಿಗೆ ಪಡೆಯುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ,ನಗರಾಡಳಿತಕ್ಕೆ ತಿಳಿದಿದ್ದರೂ ಭ್ರಷ್ಟ ವ್ಯವಸ್ಥೆಗೆ ಕೈಜೋಡಿಸುತ್ತಿದ್ದಾರೆಂಬ ಆರೋಪವಿದೆ.
ಅಕ್ರಮ ವ್ಯವಹಾರಗಳ ತಾಣ: ನಗರದ ಬಹುತೇಕ ಪೆಟ್ಟಿಗೆ ಅಂಗಡಿಗಳಲ್ಲಿ ಸಿಗರೇಟ್, ಗಾಂಜಾದಂತಹ ಮಾದಕ ಪದಾರ್ಥಗಳು, ವೇಶ್ಯಾವಾಟಿಕೆ ಬ್ರೋಕರ್ ಗಳ ತಾಣಗಳಾಗುತ್ತಿವೆ. ಬಹುತೇಕ ಪೆಟ್ಟಿಗೆ ಅಂಗಡಿಗಳಲ್ಲಿ ಕಾಲೇಜು ಹುಡುಗರು, ಪೋಲಿ ಪುಡಾರಿಗಳದ್ದೇ ವ್ಯವಹಾರವಾಗಿದೆ. ಹೆಸರಿಗೆ ಟೀ ಅಂಗಡಿಯಂತೆ ಕಂಡರೂ ಒಳಗೆಲ್ಲಾ ಹೊಲಸು ದಂಧೆಗಳದ್ದೇ ಕಾರುಬಾರು. ಇನ್ನು ಇಲ್ಲಿ ರಾಸಾಯನಿಕ ಮಿಶ್ರಿತ ಟೀ, ಕಾಫಿ ಸಿಗುತ್ತದೆ. ಇನ್ನು ಗೋಬಿ ಮಂಚೂರಿ, ಬೇಲ್ ಪುರಿ, ಚುರುಮುರಿ, ಪಾನಿಪುರಿ ಅಂಗಡಿಗಳೆಲ್ಲಾ ಸ್ವತ್ಛತೆ ಇಲ್ಲದೆ, ಕುಡಿಯಲು ಯೋಗ್ಯ ನೀರಿಲ್ಲ. ಈ ಬಗ್ಗೆ ಪೊಲೀಸರಿಗೆ, ನಗರಸಭೆ ಆರೋಗ್ಯಾಧಿಕಾರಿಗಳಿಗೆ ತಿಳಿದಿದ್ದರೂ ಕ್ರಮ ಕೈಗೊಂಡಿಲ್ಲ.
ಸುಗಮ ಸಂಚಾರಕ್ಕೆ ಅಡ್ಡಿ: ನಗರದ ಖಾಸಗಿ-ಸರ್ಕಾರಿ ಬಸ್ ನಿಲ್ದಾಣಗಳ ಸುತ್ತಲಿನ ರಸ್ತೆ ಬದಿ, ನಗರಸಭೆ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 206 ಹಾಗೂ ರೈಲ್ವೆ ನಿಲ್ದಾಣ ರಸ್ತೆ, ಕಾರೋನೇಷನ್ ರಸ್ತೆ, ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಮುಂಭಾಗ, ಸರ್ಕಾರಿ ಪದವಿ ಕಾಲೇಜು, ಟಿ.ಬಿ.ಸರ್ಕಲ್ ಸುತ್ತ ಮುತ್ತ, ಹಾಸನ ಸರ್ಕಲ್, ಗೋವಿನಪುರ ಸರ್ಕಲ್ ಸೇರಿ ಈ ಎಲ್ಲಾ ರಸ್ತೆಗಳ ಎರಡೂ ಕಡೆ ಇರುವ ಪೆಟ್ಟಿಗೆ ಅಂಗಡಿಗಳ ಮುಂದೆ ವಾಹನಗಳನ್ನು ಅಡ್ಡಾದಿಡ್ಡಿ ಯಾಗಿ ನಿಲ್ಲಿಸುತ್ತಾರೆ. ಇದರಿಂದಾಗಿ ಪಾದಚಾರಿ ಸೇರಿ ದಂತೆ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.
ಪರಿಸರದ ಸೌಂದರ್ಯಕ್ಕೆ ಧಕ್ಕೆ: ನಗರದ ಬಿ.ಎಚ್. ರಸ್ತೆಯುದ್ದಕ್ಕೂ ಸಾಕಷ್ಟು ಪೆಟ್ಟಿಗೆ ಅಂಗಡಿಗಳಿದ್ದು, ಅಲ್ಲೆಲ್ಲಾ ಬಿಸಾಡುತ್ತಿರುವ ಟೀ, ಲೋಟ, ಕವರ್ ಸೇರಿ ಇನ್ನಿತರೆ ಪದಾರ್ಥಗಳು ರಸ್ತೆಗಳ ಅಕ್ಕಪಕ್ಕದ ಚರಂಡಿ ಮತ್ತಿತರೆ ಜಾಗಗಳಲ್ಲಿ ಎಸೆಯುವುದರಿಂದ ಧಕ್ಕೆ ಯಾಗುತ್ತಿದೆ. ಚರಂಡಿಗಳಲ್ಲೆಲ್ಲಾ ಪ್ಲಾಸ್ಟಿಕ್ ಲೋಟಗಳದ್ದೇ ಕಾರುಬಾರಾಗಿದ್ದು, ಚರಂಡಿ ಆಯಕಟ್ಟಿನ ಜಾಗ ಮುಚ್ಚಿಕೊಂಡು ನೀರು ಹರಿಯದಂತೆ ತಡೆ ನಿರ್ಮಿಸಿ ಕೊಂಡಿವೆ. ಇದರಿಂದ ಸೊಳ್ಳೆಗಳು ಉತ್ಪತ್ತಿ ಯಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ಮಾಡಿ ಕೊಟ್ಟಂತಾಗಿದೆ. ಈ ಬಗ್ಗೆ ನಗರಸಭೆ, ಪೊಲೀಸ್, ತಾಲೂಕು ಆಡಳಿತ ಕೂಡಲೇ ಗಮನ ಹರಿಸಿ ಅಂಗಡಿಗಳನ್ನು ತೆರವುಗೊಳಿಸಿ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ.
-ಬಿ.ರಂಗಸ್ವಾಮಿ, ತಿಪಟೂರು