Advertisement

ಸ್ಪರ್ಧೆಯಿಂದ ಹಿಂದೆ ಸರಿಯಲು ಸಲಹೆ?

06:28 AM Feb 20, 2019 | |

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್‌ ರೈ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಬೆಂಬಲಿಸುವಂತೆ ಮಾಡಿಕೊಂಡಿರುವ ಮನವಿಯನ್ನು ಕಾಂಗ್ರೆಸ್‌ ನಾಯಕರು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಚುನಾವಣೆಯಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಕಾಶ್‌ ರೈಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಜಸ್ಟ್‌ ಆಸ್ಕಿಂಗ್‌ ಅಭಿಯಾನ ಮೂಲಕ ಚುನಾವಣಾ ಕಣಕ್ಕಿಳಿದಿರುವ ರೈ, ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾಂಗ್ರೆಸ್‌ ಬೆಂಬಲ ನೀಡುತ್ತದೆ ಎಂಬ ಲೆಕ್ಕಾಚಾರದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಆದರೆ, ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಪಕ್ಷದ ನಿಯಮ ಮೀರಿ ಬೆಂಬಲಿಸಲು ಸಾಧ್ಯವಿಲ್ಲ ಎಂದಿರುವ ಸಿದ್ದರಾಮಯ್ಯ, ನೀವು ಸ್ಪರ್ಧೆ ಮಾಡುವುದರಿಂದ ಬಿಜೆಪಿಗೆ ಹೆಚ್ಚು ಅನುಕೂಲವಾಗುತ್ತದೆ. ಅದರಿಂದ ಚುನಾವಣೆಯಿಂದ ಹಿಂದೆ ಸರಿಯುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಲಿಖೀತ ಬೆಂಬಲ ಪಡೆದ ಕಾರ್ಯದರ್ಶಿಗಳು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎನ್ನುವ ಕುರಿತಂತೆ ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಕೂರ್‌, ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಪೊರೇಟರ್‌ಗಳಿಂದ ಲಿಖೀತ ಹೇಳಿಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ರಿಜ್ವಾನ್‌ ಆರ್ಷದ್‌ ಹಾಗೂ ರೋಷನ್‌ ಬೇಗ್‌ ಪರ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. 

ಈ ಕುರಿತು ಮಾಧ್ಯಮಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಪ್ರಕಾಶ್‌ ರೈ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಹಾಗೆ ಬೆಂಬಲ ಕೊಡಿ ಎಂದು ಕೇಳಿದರೆ ಆಗುವುದಿಲ್ಲ. ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವುದಾದರೆ ನೋಡಬಹುದು. ಇದೇ ಕ್ಷೇತ್ರ ಬೇಕು ಎಂದು ಪಟ್ಟು ಹಿಡಿದರೆ ಅದೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 

Advertisement

ನಮ್ಮದು ರಾಷ್ಟ್ರೀಯ ಪಕ್ಷ. ಪರೋಕ್ಷ ಬೆಂಬಲ ನೀಡಲು ಆಗುವುದಿಲ್ಲ. ಈಗಾಗಲೇ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ತೀರ್ಮಾನವಾಗಿದೆ. ಪ್ರಕಾಶ್‌ ರೈ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ನಮ್ಮ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.

ರಿಜ್ವಾನ್‌, ರೋಷನ್‌ ನಡುವೆ ಪೈಪೋಟಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 2014 ರಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಹಾಗೂ ಮಾಜಿ ಸಚಿವ ರೋಷನ್‌ ಬೇಗ್‌ ನಡುವೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

ರಿಜ್ವಾನ್‌ ಕಳೆದ ಬಾರಿ ಚುನಾವಣೆಯಲ್ಲಿ 1.5 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಪಿ.ಸಿ.ಮೋಹನ್‌ ವಿರುದ್ಧ ಸೋಲುಂಡಿದ್ದರು. ಆದರೂ, ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು, ತಮಗೇ ಟಿಕೆಟ್‌ ನೀಡಬೇಕೆಂಬ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಸಚಿವ ಸ್ಥಾನ ವಂಚಿತರಾಗಿರುವ ರೋಷನ್‌ ಬೇಗ್‌ ತಾವು ಸಂಸತ್‌ ಸದಸ್ಯರಾಗಿ ತಮ್ಮ ಪುತ್ರನಿಗೆ ಶಿವಾಜಿನಗರ ಕ್ಷೇತ್ರ ಬಿಟ್ಟುಕೊಡುವ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಟಿಕೆಟ್‌ ಪಡೆಯಬೇಕೆಂದು ಹೈ ಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಇವರಿಬ್ಬರ ನಡುವೆ ಅಲ್ಪಸಂಖ್ಯಾತರ ಬದಲು ಹಿಂದೂ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಜಯ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next