Advertisement

ಮತ್ತೆ ಅಡ್ಡಾಡುತ್ತಿವೆ ಟಿಂಟ್‌ ಗಾಜಿನ ಕಾರುಗಳು

10:25 AM Oct 26, 2018 | Team Udayavani |

ಮಹಾನಗರ: ವಾಹನಗಳ ಗಾಜುಗಳಿಗೆ ಅಳವಡಿಸಿದ್ದ ಟಿಂಟ್‌ ಪೇಪರ್‌ ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿ ವರ್ಷಗಳೇ ಕಳೆದಿದೆ. ಇದೀಗ ಮತ್ತೆ ಟಿಂಟ್‌ ಅಳವಡಿಸಿದ ಕಾರುಗಳು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿವೆ. ಸಂಚಾರಿ ಪೊಲೀಸರು ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಸೀಟ್‌ ಬೆಲ್ಟ್ ತೊಡದ ವಾಹನ ಚಾಲಕರ ಮೇಲೆ ಕೇಸು ಹಾಕುತ್ತಿದ್ದಾರೆ. ಆದರೆ ಕಾರುಗಳ ಗ್ಲಾಸ್‌ಗಳಿಗೆ ಟಿಂಟ್‌ ಅಳವಡಿಸಿದವರನ್ನು ಪ್ರಶ್ನಿಸುವವರೇ ಇಲ್ಲ ಎಂಬಂತಾಗಿದೆ.

Advertisement

ಸಂಚಾರ ನಿಯಮಗಳ ಕುರಿತಂತೆ ಜಾಗೃತಿ ಮೂಡಿಸಲು ಸಂಚಾರ ಪೊಲೀಸರು ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಟಿಂಟ್‌ ಅಳವಡಿಸಿದ ಪ್ರಕರಣ ಪತ್ತೆಯಾದರೆ ಮೊದಲು 100 ರೂ. ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ 300 ರೂ. ದಂಡ ವಿಧಿಸಲು ಪೊಲೀಸರಿಗೆ ಅವಕಾಶ ಇದೆ. ಆದರೆ ಆದೇಶ ಪ್ರಕಾರ 3ನೇ ಬಾರಿ ಸಿಕ್ಕಿಬಿದ್ದರೆ ವಾಹನ ದಾಖಲೆಯನ್ನು ಮುಟ್ಟುಗೋಲು ಹಾಕಲು ಪೊಲೀಸರಿಗೆ ಅವಕಾಶ ಇದೆ.

ಟಿಂಟ್‌ ಬದಲು ಪರದೆ
ವಾಹನದ ಒಳಗೆ ಬೀಳುವ ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಕೆಲವು ಮಾಲಕರು ವಾಹನದ ಒಳಗಡೆಯಿಂದ ಪರದೆ ಅಳವಡಿಸಲು ಶುರು ಮಾಡಿದ್ದಾರೆ. ಇದು ಕೋರ್ಟ್‌ ಆದೇಶ ಪ್ರಕಾರ ಟಿಂಟ್‌ ಗ್ಲಾಸ್‌ಗಿಂತಲೂ ಹೆಚ್ಚು ಅಪಾಯಕಾರಿಯಾದ ಕ್ರಮವಾಗಿದೆ. ಸಂಚಾರ ನಿಯಮವನ್ನು ಉಲ್ಲಂಸುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರಗಿಸಬೇಕಾಗಿದೆ.

ಕೋರ್ಟ್‌ ಆದೇಶವಿದ್ದರೂ ಬಳಕೆ 
ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಾಹನ ಸವಾರರು ಗಾಜುಗಳಿಗೆ ಕಪ್ಪು ಟಿಂಟ್‌ ಪೇಪರ್‌ ಹಾಕುತ್ತಾರೆ. ಆದರೆ ಕೆಲವು ದುಷ್ಕರ್ಮಿಗಳು ಅಪಹರಣ, ಅತ್ಯಾಚಾರ, ದರೋಡೆ ಸಹಿತ ಹಲವು ಅಪರಾಧ ಚಟುವಟಿಕೆಗಳಿಗೆ ಪೂರಕವಾಗಿ ಈ ರೀತಿಯ ಗಾಜನ್ನು ಬಳಕೆ ಮಾಡುತ್ತಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಹಿನ್ನೆಲೆಯಲ್ಲಿ ವಾಹನಗಳ ಗ್ಲಾಸ್‌ ಗಳಿಗೆ ಟಿಂಟ್‌ ಬಳಸದಂತೆ 2012ರ ಎಪ್ರಿಲ್‌ 27ರಂದು ಆದೇಶ ಹೊರಡಿಸಿತು. ಈ ಆದೇಶ ಬಂದ ಬಳಿಕ ಕೆಲವರು ಸ್ವಯಂ ಪ್ರೇರಿತವಾಗಿ ಟಿಂಟ್‌ ತೆಗೆದು ಹಾಕಿದರೆ, ಇನ್ನು ಕೆಲವರ ವಾಹನದ ಟಿಂಟ್‌ನ್ನು ಪೊಲೀಸರು ಬಲವಂತವಾಗಿ ಕಿತ್ತು ಹಾಕಿದರು. ಆರಂಭದಲ್ಲಿ ಕೆಲವು ಕಡೆಗಳಲ್ಲಿ ಟಿಂಟ್‌ ತೆಗೆಯುವ ಕಾರ್ಯಾಚರಣೆ ನಡೆಸಿದ ಪೊಲೀಸರು ಬಳಿಕ ದಂಡ ವಸೂಲಿಗೆ ಇಳಿದರು. ಆದರೆ ಈಗ ಮತ್ತೆ ವಾಹನಗಳಲ್ಲಿ ಟಿಂಟ್‌ ಅಳವಡಿಸಿರುವುದು ಕಾಣಿಸುತ್ತಿದೆ.

ಟಿಂಟ್‌ ಹಾಕಿದ ವಾಹನಗಳಿಗೆ ಕ್ರಮ; ದಂಡ
ಗಾಜಿಗೆ ಟಿಂಟ್‌ ಅಳವಡಿಸಿದ ವಾಹನ ಕಂಡುಬಂದರೆ ನಾವೇ ತೆಗೆಯುತ್ತೇವೆ ಮತ್ತು ದಂಡ ಹಾಕುತ್ತೇವೆ. ಪ್ರತಿಯೊಬ್ಬರು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.
ಮಂಜುನಾಥ್‌ ಶೆಟ್ಟಿ,
  ಎಸಿಪಿ, ಮಂಗಳೂರು ನಗರ
  ಸಂಚಾರ ವಿಭಾಗ

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next