ಮಾಲೂರು: ನೂರಾರು ವರ್ಷಗಳ ಇತಿಹಾಸವಿರುವ ತಿಮ್ಮನಾಯಕನ ಹಳ್ಳಿಯ ತಿಮ್ಮಪ್ಪನಾಯಕನ ಕೋಟೆ ತಾಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ಅವಸಾನದ ಅಂಚಿಕೆ ತಲುಪಿದೆ.
ತಾಲೂಕಿನ ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಿಮ್ಮನಾಯಕನಹಳ್ಳಿ ಬಳಿ 300 ವರ್ಷಗಳ ಹಿಂದೆ ಟಿಪ್ಪು ಸಲ್ತಾರ ಅಳ್ವಿಕೆಯಲ್ಲಿ ಸಾಮಾಂತನಾಗಿದ್ದ ತಿಮ್ಮಪ್ಪನಾಯಕ ಅರ್ಧ ಎಕರೆ ಪ್ರದೇಶದಲ್ಲಿ ಊರಿಗಿಂತ ಎತ್ತರವಾಗಿ ವಿಶಾಲವಾಗಿರುವ ಬಂಡೆಯ ಮೇಲೆ ಕಲ್ಲಿನ ಕೋಟೆ ನಿರ್ಮಿಸಿದ್ದರು. ಈಗ ಸಮರ್ಪಕ ನಿರ್ವಹಣೆ ಇಲ್ಲದೆ ಅಳುವಿನ ಅಂಚಿಗೆ ತಲುಪುತ್ತಿದೆ.
ಕಾವಲು ಗೋಪುರ: ಬ್ರಿಟಿಷರು ದಂಡೆತ್ತಿ ಬಂದಾಗ ದಾಳಿಯಿಂದ ತಪ್ಪಿಸಿಕೊಳ್ಳಲು ತಿಮ್ಮಪ್ಪನಾಯಕ ತಮ್ಮ ಸೇನೆ ಮತ್ತು ಪ್ರಜೆಗಳ ರಕ್ಷಣೆಗೆ ಗ್ರಾಮದ ಸುತ್ತಲು ವಿಶಾಲವಾದ ಕಲ್ಲಿನ ಕೋಟೆ ನಿರ್ಮಿಸಿಕೊಳ್ಳುವುದರ ಜೊತೆಗೆ ತಮ್ಮ ರಕ್ಷಣೆಗಾಗಿ ಗ್ರಾಮಕ್ಕೆ ಹೊಂದಿಕೊಂಡಿರುವ ವಿಶಾಲವಾದ ಬಂಡೆಯ ಮೇಲೆ ನಾಲ್ಕರಿಂದ 5 ಅಡಿಗಳ ದಪ್ಪನಾದ ಕಲ್ಲಿನಿಂದ ಕೋಟೆ ನಿರ್ಮಿಸಿ, ಕೋಟೆಯ ನಾಲ್ಕು ಭಾಗಗಳಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸಿದ್ದಾರೆ.
ವಿಶಾಲವಾದ ಕೆರೆ: ಕೋಟೆಗೆ ಉತ್ತರದ ಕಡೆಗೆ ಹೆಬ್ಟಾಗಿಲು ಇದ್ದು, ಕೋಟೆಯ ಒಳಾಂಗಣವು ಚೌಕಕಾರವಾಗಿ ದೇವಾಲಯ ಸಾಮಂತರ ಮನೆಗಳು ಮತ್ತು ಸೈನ್ಯದ ಅಯುಧಗಳ ಸಂಗ್ರಹಗಾರಗಳು ಇದ್ದ ಬಗ್ಗೆ ಗ್ರಾಮ ಹಿರಿಯರು ತಿಳಿಸುತ್ತಾರೆ. ತಾತ ರಾಮಚಂದ್ರಪ್ಪ ಅವರು ಕೋಟೆಯಲ್ಲಿನ ಆಂಜನೇಯ ಸ್ವಾಮಿ ಅರ್ಚಕರಾಗಿದ್ದು, ಸಾಮಂತರ ಅಳ್ವಿಕೆಯಲ್ಲಿ ರಾಜಾಶ್ರಯದಲ್ಲಿದ್ದರು. ಕೋಟೆಯ ನೈಋತ್ಯ ಭಾಗದಲ್ಲಿ ವಿಶಾಲವಾದ ತಿಮ್ಮನಾಯಕನಹಳ್ಳಿ ಕೆರೆ ಇದ್ದು, ಕೆರೆ ತುಂಬಿದರೆ 15 ಗ್ರಾಮಗಳ ಗ್ರಾಮಸ್ಥರು ತೆಪ್ಪೋತ್ಸವ ನಡೆಸುವ ವಾಡಿಗೆ ಇಂದಿಗೂ ಇದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಮುನಿರಾಜು ಹೇಳುತ್ತಾರೆ.
ಸಾಮಂತರ ಅಳ್ವಿಕೆಯ ನಂತರ ಅಳಿದು ಉಳಿದ ಕೋಟೆಯ ಉಸ್ತುವಾರಿ ವಹಿಸಿಕೊಂಡಿರುವ ಲಕ್ಷ್ಮಮ್ಮನವರ ಸೋದರ ರಾಮಮೂರ್ತಿ ಕೋಟೆಗೆ ಪುಂಡ ಪೋಕರಿಗಳಿಂದ ಉಂಟಾಗಬಹುದಾಗಿದ್ದ ಹಾನಿ ಮತ್ತು ಹಾವಳಿ ತಡೆದು ರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಪುರಾತನ ಕೋಟೆಯಾಗಿರುವುದರಿಂದ ಅನೇಕ ಮಂದಿ ದುಷ್ಟರಿಗೆ ನಿಧಿ ಇರುವ ಬಗ್ಗೆ ಸಂಶಯಗಳಿದ್ದು, ಶೋಧಕ್ಕಾಗಿ ಅನೇಕ ಪ್ರಯತ್ನಗಳು ನಡೆದ ನಿದರ್ಶನಗಳಿವೆ ಎನ್ನುವ ಗ್ರಾಮಸ್ಥರು, ಅವಸಾನದ ಅಂಚಿನಲ್ಲಿರುವ ಪುರಾತನ ಕೋಟೆಯ ರಕ್ಷಣೆ ಅಗತ್ಯವಿದೆ ಎನ್ನುತ್ತಾರೆ.
ಕೋಟೆ ರಕ್ಷಿಸಿ: ಅಡಿಪಾಯವಿಲ್ಲದ ನಾಲ್ಕು ಅಡಿಗಳ ಅಗಲದ ಕಲ್ಲಿನ ಗೋಡೆಯ ಮೂಲಕ ನಿರ್ಮಿಸಿರುವ ಪುರಾತನ ಕಲ್ಲಿನ ಕೋಟೆಯನ್ನು ರಕ್ಷಿಸಿದಲ್ಲಿ ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಲು ಹೆಚ್ಚು ಅನುಕೂಲವಾಗುವುದರ ಜೊತೆಗೆ ಪುರಾತನ ತಲೆಮಾರಿನ ಪಳೆಯುಳಿಕೆಯೊಂದನ್ನು ಸಮಾಜಕ್ಕಾಗಿ ಉಳಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಸ್ಥಳಿಯ ಅಡಳಿತ ಹೆಚ್ಚು ಆಸಕ್ತಿ ವಹಿಸಿ ಪುರಾತನ ಕಲ್ಲಿನ ಕೋಟೆ ರಕ್ಷಿಸುವ ಅಗತ್ಯವಿದೆ.