ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಲು ಪಾಲಿಕೆ ಆ್ಯಂಬುಲೆನ್ಸ್ ಡಿಸ್‌ಪ್ಯಾಚ್ ಕಂಟ್ರೋಲ್ ಸೆಂಟರ್ (ಆ್ಯಂಬುಲೆನ್ಸ್ ಸೇವೆಗೆ ಮುಕ್ತವಾದ ಸಮಯ ತಿಳಿಯುವ ನಿರ್ವಹಣಾ ಕೇಂದ್ರ) ಸ್ಥಾಪಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಸಕಾಲದಲ್ಲಿ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿಲ್ಲ ಎಂಬ ದೂರು ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮೂಲಕ ನಗರದಲ್ಲಿ ಆ್ಯಂಬುಲೆನ್ಸ್‌ಗಳ ರಿಯಲ್ ಟೈಮ್ ಸೇವೆ ನೀಡಲು ಪಾಲಿಕೆ ಮುಂದಾಗಿದೆ. ಆ್ಯಂಬುಲೆನ್ಸ್‌ಗಳಿಗೆ ನೂತನ ತಂತ್ರಾಂಶ ಅಳವಡಿಸಲಾಗಿದ್ದು, ಎಲ್ಲಾ ಆ್ಯಂಬುಲೆನ್ಸ್ (ಬಿಬಿಎಂಪಿಯ)ಗಳ ಚಾಲಕರಿಗೆ ಟ್ರಾನ್ಸ್ ಫರ್ ಡೈನಮಿಕ್ ಆ್ಯಪ್ (ಟಿಆರ್‌ಡಿ)ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ನಗರದಲ್ಲಿ ಬಿಬಿಎಂಪಿ ಆ್ಯಂಬುಲೆನ್ಸ್‌ಗಳು ಎಲ್ಲೇ ಇದ್ದರೂ ಅದರ ನಿಖರ ಮಾಹಿತಿ ಬಿಬಿ ಎಂಪಿ ಕೇಂದ್ರ ಕಚೇರಿಯ ಡ್ಯಾಶ್ ಬೋರ್ಡ್‌ನಲ್ಲಿ ಲಭ್ಯವಾಗಲಿದೆ. ಅಲ್ಲದೇ, ಈ ತಂತ್ರಾಂಶವನ್ನು ಆಸ್ಪತ್ರೆ ಹಾಸಿಗೆ ನಿರ್ವಹಣಾ ಪೋರ್ಟಲ್ (ಸಿಎಚ್‌ಬಿಎಂಎಸ್)ಗೆ ಲಿಂಕ್ ಮಾಡಿಕೊಳ್ಳಲಾಗಿದೆ. ಡ್ಯಾಶ್ ಬೋರ್ಡ್‌ನ ಮೂಲಕ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಇದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಉಬರ್-ಓಲಾ ರೀತಿ ನಿರ್ವಹಣೆ: ಬಿಬಿಎಂಪಿ ಆ್ಯಂಬುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಸಿರುವುದರಿಂದಾಗಿ ಈ ಆ್ಯಂಬುಲೆನ್ಸ್ ಗಳು ಎಲ್ಲಿವೆ, ಆಸ್ಪತ್ರೆ ತಲುಪಿದೆಯೇ ಇಲ್ಲವೇ, ರೋಗಿಗಳ ಮನೆಗೆ ಹೋಗಿದೆಯೇ ಎನ್ನುವ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ಒಬ್ಬರು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಉಬರ್ ಹಾಗೂ ಓಲಾ ರೀತಿಯಲ್ಲಿ ಆ್ಯಂಬುಲೆನ್ಸ್ ಚಾಲಕರಿಗೆ ಸಂದೇಶ ಬರಲಿದೆ. ಈ ರೀತಿ ಸಂದೇಶ ಬಂದ ಮೇಲೆ ಆ್ಯಂಬುಲೆನ್ಸ್ ಚಾಲಕರು ಮತ್ತೂಂದು ಟ್ರಿಪ್‌ಗೆ ಸಿದ್ಧರಾಗುತ್ತಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲೂ ಯಾವ ಆ್ಯಂಬುಲೆನ್ಸ್ ಖಾಲಿ ಇದೆ ಮತ್ತು ಯಾವ ಪ್ರದೇಶದಲ್ಲಿದೆ ಎಂದು ತಿಳಿಯುವುದರಿಂದ ಕೂಡಲೇ ಸಂಪರ್ಕ ಸಾಧಿಸಲು ಅನುವಾಗುತ್ತದೆ. ಒಂದು ವಾರ್ಡ್‌ನಲ್ಲಿ ಆ್ಯಂಬುಲೆನ್ಸ್ ಇಲ್ಲದೆ ಇದ್ದರೆ, ಪಕ್ಕದ ವಾರ್ಡ್‌ನಲ್ಲಿನ ಆ್ಯಂಬುಲೆನ್ಸ್ ಬಳಸಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಸೇಜ್ ತಂತ್ರಜ್ಞಾನ ಅಳವಡಿಕೆ : ಆ್ಯಂಬುಲೆನ್ಸ್ ಟ್ರ್ಯಾಕಿಂಗ್‌ನೊಂದಿಗೆ ಕೋವಿಡ್ ಸೋಂಕಿತರು, ಸಿಬ್ಬಂದಿ ನಡುವೆ ಸಂವಹನಕ್ಕೆ ಮೆಸೇಜ್ ವ್ಯವಸ್ಥೆ ಮಾಡಲೂ ಪಾಲಿಕೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಸೋಂಕಿತರಿಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಇಂತಹ ಆ್ಯಂಬುಲೆನ್ಸ್ ಸಂಖ್ಯೆ, ಆ್ಯಂಬುಲೆನ್ಸ್ ಸಿಬ್ಬಂದಿ ಹೆಸರು ಹಾಗೂ ಅವರು ಬರುವ ಸಮಯದ ಮಾಹಿತಿ ರವಾನೆಯಾಗಲಿದೆ. ಅಲ್ಲದೆ, ಇದೇ ವೇಳೆ ಅವರು ದಾಖಲಾಗುವ ಆಸ್ಪತ್ರೆ, ಅಲ್ಲಿನ ನೋಡಲ್ ಅಧಿಕಾರಿಗೆ ಸಂದೇಶ ರವಾನೆಯಾಗಲಿದ್ದು, ಸೋಂಕಿತರನ್ನು ದಾಖಲು ಮಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಎಲ್ಲವೂ ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಈ ವ್ಯವಸ್ಥೆ ಪರಿಚಯಿಸಲು ಪಾಲಿಕೆ ಮುಂದಾಗಿದೆ.
ನೂತನ ತಂತ್ರಾಂಶದಿಂದ ಆ್ಯಂಬುಲೆನ್ಸ್ ಎಲ್ಲಿದೆ, ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಎಷ್ಟು ಸಮಯ ತೆಗೆದುಕೊಳ್ಳು ತ್ತಿದೆ ಎಂದು ತಿಳಿಯುತ್ತದೆ. ಕೆಲವೊಮ್ಮೆ ಆಸ್ಪತ್ರೆ ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿ ನಡುವೆ ಸಮನ್ವಯತೆ ಸಾಧಿಸಲೂ ಸಹಕಾರಿ.-
ರಂದೀಪ್, ವಿಶೇಷ ಆಯುಕ್ತ (ಆರೋಗ್ಯ ಹಾಗೂ ಘನತ್ಯಾಜ್ಯ ನಿರ್ವಹಣೆ)
–ಹಿತೇಶ್ ವೈ.