ಕಾಲಮಿತಿ ಯಕ್ಷಗಾನದಲ್ಲಿ ರಾತ್ರಿ 7ರಿಂದ 12ರ ವರೆಗೆ ಮಾತ್ರ ಪ್ರದರ್ಶನ. ಪೂರ್ವರಂಗವಂತೂ ಮಾಯವೇ ಆಯಿತು. ನೇರವಾಗಿ ಪ್ರಸಂಗ ಪ್ರವೇಶ, ಕೆಲವು ಪಾತ್ರ, ಪದ್ಯಗಳನ್ನು ಕೈಬಿಟ್ಟು, ಕಥೆಯ ಪ್ರಧಾನ ಭಾಗ ಮಾತ್ರ ಉಳಿಸಿಕೊಂಡು ಪ್ರಸಂಗಗಳನ್ನೂ ಕಿರಿದುಗೊಳಿಸಲಾಯಿತು. ಕಲಾವಿದರಿಗೂ ಅನುಕೂಲವೆನಿಸಿ ಇವು ಜನಪ್ರಿಯವಾದ ಮೇಲೆ ಧರ್ಮಸ್ಥಳ, ಹನುಮಗಿರಿ ಸಹಿತ ಹಲವು ಮೇಳಗಳು ಇದನ್ನೇ ಅಳವಡಿಸಿಕೊಂಡವು.
Advertisement
ರಾಜಾಂಗಣದಲ್ಲಿ ಕಲಾತಿಥ್ಯಕಲಾ ಪ್ರದರ್ಶನಗಳಿಗೆ ಹೆಸರಾದ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿ ಅವರ ಆಶ್ರಯದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ – ಮೇ 3ರಿಂದ 9ರ ವರೆಗೆ ಯಕ್ಷಗಾನ ಸಪ್ತಾಹ ಹಮ್ಮಿಕೊಂಡಿತ್ತು. ಏಳು ದಿನಗಳಲ್ಲಿ ಹನ್ನೊಂದು ಪ್ರಸಂಗಗಳನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡಿತು. ಮೇ 3ರಂದು ದಕ್ಷಾಧ್ವರ, ಗಿರಿಜಾ ಕಲ್ಯಾಣ, ಮೇ 4ರಂದು ಕಾಯಕಲ್ಪ, 5ರಂದು ಸೌದಾಸ ಚರಿತ್ರೆ, 6ರಂದು ದಮಯಂತಿ ಪುನಃ ಸ್ವಯಂವರ, ಅತಿಕಾಯ ಕಾಳಗ, 7ರಂದು ವಿದ್ಯುನ್ಮತಿ ಕಲ್ಯಾಣ, 8ರಂದು ಪಾರಿಜಾತ, ನರಕಾಸುರ ಹಾಗೂ ಮೈಂದ-ದ್ವಿವಿದ ಹಾಗೂ ಕೊನೆಯ ದಿನ ಪಾದಪ್ರತೀಕ್ಷಾ – ಎಲ್ಲ ಪ್ರದರ್ಶನಗಳಿಗೂ ರಾಜಾಂಗಣ ಕಿಕ್ಕಿರಿದಿತ್ತು. ಎರಡು, ಮೂರು ದಿನ ಮಳೆಯೂ ಸಂಗಾತಿಯಾಯಿತು.
ವಿಶೇಷವೆಂದರೆ, ಇವೆಲ್ಲವೂ ಪೌರಾಣಿಕ ಪ್ರಸಂಗಗಳು. ಕೆಲವಂತೂ ಅಪೂರ್ವ ಪ್ರದರ್ಶನಗಳು. ಪದ್ಯಾಣ ಗಣಪತಿ ಭಟ್ಟರು ಹಾಗೂ ರವಿಚಂದ್ರ ಕನ್ನಡಿಕಟ್ಟೆ ಅವರ ಸುಮಧುರ ಭಾಗವತಿಕೆಯಲ್ಲಿ ನೋಡಿರಿ ದ್ವಿಜರು ಪೋಪುದನು, ಕಾಮಿನಿ ನೀ ಯಾರೆ ಕೋಮಲೆ ಇತ್ಯಾದಿ ಹಾಡುಗಳು ಹೊಸ ಹೊಳಹನ್ನೇ ಸೂಸಿದವು. ಪದ್ಮನಾಭ ಉಪಾಧ್ಯಾಯ, ಪದ್ಯಾಣ ಶಂಕರನಾರಾಯಣ, ಚೈತನ್ಯಕೃಷ್ಣ ಹಾಗೂ ವಿನಯ ಕಡಬ ಅವರನ್ನೊಳಗೊಂಡ ನುರಿತ ಹಿಮ್ಮೇಳ ಪ್ರಧಾನ ಆಕರ್ಷಣೆಯಾಗಿತ್ತು. ನೃತ್ಯ, ಆಭಿನಯದ ರಸದೌತಣ
ಹಿರಿಯರಾದ ಶಿವರಾಮ ಜೋಗಿ (ಭೃಗು ಮಹರ್ಷಿ, ಬಲರಾಮ ಇತ್ಯಾದಿ ಪಾತ್ರಗಳು) ಅವರಿಂದ ತೊಡಗಿ ಮುಮ್ಮೇಳ ಕಲಾವಿದರಂತೂ ಪೈಪೋಟಿಗೆ ಬಿದ್ದವರಂತೆ ಅಭಿನಯ ಚತುರತೆ ತೋರಿದರು. ಸುಬ್ರಾಯ ಹೊಳ್ಳ ಕಾಸರಗೋಡು- ಪೆರ್ಮುದೆ ಜಯಪ್ರಕಾಶ ಶೆಟ್ಟಿ ಅವರ ಜೋಡಿಯ ಅತಿ ವಿಶಿಷ್ಟ ಮೈಂದ – ದ್ವಿವಿದ, ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಸಂಪಾಜೆ ದಿವಾಕರ ರೈ ಅವರ ರತಿ-ಮನ್ಮಥರ ಜೋಡಿಗೆ ಚಪ್ಪಾಳೆಗಳ ಸುರಿಮಳೆಯೇ ಆಯಿತು. ವೀರಭದ್ರ, ನರಕಾಸುರ, ದುಂದುಭಿ ಇತ್ಯಾದಿ ಬಣ್ಣದ ವೇಷಗಳಲ್ಲಿ ವಿಜೃಂಭಿಸಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಈಶ್ವರ, ಕೃಷ್ಣ, ರಾಮನಾಗಿ ಮಾತಿನಲ್ಲೇ ಮೋಡಿ ಮಾಡಿದ ವಾಸುದೇವ ರಂಗಾಭಟ್, ಹಾಸ್ಯದ ಹೊನಲು ಹರಿಸಿದ ಬಂಟ್ವಾಳ ಜಯರಾಮ ಆಚಾರ್ಯ ಹಾಗೂ ಕಟೀಲು ಸೀತಾರಾಮ ಕುಮಾರ್, ಹೊಳ್ಳರ ದಕ್ಷ, ಮದಿರಾಕ್ಷನಾಗಿ ಕುಣಿದ ದಿವಾಕರ ರೈ, ಜಯಾನಂದ ಸಂಪಾಜೆ ಅವರ ದೇವೇಂದ್ರ, ಸಂತೋಷ ಹಿಲಿಯಾಣರ ಗಿರಿಜೆ, ಏಳಿ ಸಖೀಯರೆ ನೀರಕೇಳಿಗೈಯುವ ಎಂದು ಸಖೀಯರನ್ನು ಜಲಕ್ರೀಡೆಗೆ ಕರೆಯುವ ಸುಕನ್ಯೆ, ದಮಯಂತಿ, ದಾûಾಯಿಣಿ ಇತ್ಯಾದಿ ಪಾತ್ರಗಳಲ್ಲಿ ಪ್ರೇಕ್ಷಕರನ್ನೂ ಕುಣಿಸಿದ ರಕ್ಷಿತ್ ಶೆಟ್ಟಿ ಪಡ್ರೆ – ಒಂದೇ ಎರಡೇ! ಎಳೆಯ ಹುಡುಗ ಅಜಿತ್ ಪುತ್ತಿಗೆ ಆವರ ಕುಣಿತವಂತೂ ಅದ್ಭುತವಾಗಿತ್ತು. ಅರಳಿದ ಕುಸುಮದ ಮಧುವನು ಹೀರುತ – ಹಾಡಿಗೆ ಸೌದಾಸ (ಸುಬ್ರಾಯ ಹೊಳ್ಳ) ಹಾಗೂ ಮದಯಂತಿ (ಹಿಲಿಯಾಣ) ನೃತ್ಯದ ಭಾವ – ಭಂಗಿಗಳು ಶೃಂಗಾರ ಭಾವಕ್ಕೆ ಹೊಸ ಭಾಷ್ಯ ಬರೆದವು. ಅತಿಕಾಯನ ಪಾತ್ರಕ್ಕೂ ಹೊಳ್ಳರು ಹೊಸ ವಿಶ್ಲೇಷಣೆಗಳ ಮೂಲಕ ಜೀವ ತುಂಬಿದರು. ಲಕ್ಷ್ಮಣನಾಗಿ ದಿವಾಕರ ರೈ ಅಭಿನಯವೂ ಅಚ್ಚುಕಟ್ಟಾಗಿತ್ತು. ಕೊನೆಯ ಪ್ರಸಂಗ ಪಾದಪ್ರತೀಕ್ಷಾದಲ್ಲಿ ಧನುಗಂಧರ್ವ ಪಾತ್ರಕ್ಕೆ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಜೀವ ತುಂಬಿದ ಪರಿಯಂತೂ ವರ್ಣಿಸಲಸದಳ.
Related Articles
Advertisement
ಚುಟುಕಾದ ಪ್ರಸಂಗಗಳು, ಚುರುಕಾದ ನಿರೂಪಣೆ, ಹದ ಮೀರದ ಅಭಿನಯ, ಚೌಕಟ್ಟು ಮೀರದ ಹಾಸ್ಯ – ಇವುಗಳ ಮೂಲಕ ಹನುಮಗಿರಿ ಮೇಳದ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಅನಂತ ಹುದೆಂಗಜೆ