ಹಾವೇರಿ: ಜಿಲ್ಲೆಯ ಜನರ ದಶಕದ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜಿನ ಆರಂಭಕ್ಕೆ ಕಾಲ ಸನ್ನಿಹಿತವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) 2022-23ನೇ ಶೈಕ್ಷಣಿಕ ಸಾಲಿನಲ್ಲಿ ಹಾವೇರಿ ಮೆಡಿಕಲ್ ಕಾಲೇಜಿಗೆ 150 ಎಂಬಿಬಿಎಸ್ ಸೀಟುಗಳ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಜಿಲ್ಲೆಯ ಜನರ ಕನಸು ಸಾಕಾರಗೊಳ್ಳುವಂತಾಗಿದೆ.
ಕಳೆದ ವರ್ಷವೇ ಇಲ್ಲಿ ಮೆಡಿಕಲ್ ಕಾಲೇಜು ತರಗತಿ ಆರಂಭವಾಗುವ ನಿರೀಕ್ಷೆ ಇತ್ತಾದರೂ ಮೂಲ ಸೌಕರ್ಯ ಕೊರತೆ ಕಾರಣದಿಂದ ಎನ್‌ಎಂಸಿ ಅನುಮತಿ ನೀಡಿರಲಿಲ್ಲ. ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲೇ ತಾತ್ಕಾಲಿಕವಾಗಿ ಮೆಡಿಕಲ್ ಕಾಲೇಜು ತರಗತಿ ನಡೆಸಲು ಅಗತ್ಯ ಸಿದ್ಧತೆ ನಡೆಸಲಾಗಿತ್ತು. ಆದರೆ, ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ದೊರೆಯದೇ ನಿರಾಸೆಯಾಗಿತ್ತು. ಸದ್ಯ ದೇವಗಿರಿ ಯಲ್ಲಾಪುರ ಬಳಿ ಸುಸಜ್ಜಿತ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿರುವುದರಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗ 2022-23ನೇ ಸಾಲಿನಿಂದಲೇ ತರಗತಿ ಆರಂಭಕ್ಕೆ ಅನುಮತಿ ನೀಡಿದೆ.
ಈಗಾಗಲೇ ಪ್ರವೇಶ ಪರೀಕ್ಷೆ ಬರೆದು ಮೆಡಿಕಲ್ ಸೀಟಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಹಾವೇರಿಯಲ್ಲಿ ಆರಂಭವಾಗುವ ಕಾಲೇಜಿನಲ್ಲಿ ಸೀಟು ಪಡೆಯಲು ಸಾಧ್ಯವಾಗಲಿದೆ. 150 ಎಂಬಿಬಿಎಸ್ ಸೀಟು ಪ್ರವೇಶಕ್ಕೆ ಅವಕಾಶ ದೊರೆತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ತವರು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗುತ್ತಿದೆ.
ಭರದಿಂದ ನಡೆದಿದೆ ಕಟ್ಟಡ ಕಾಮಗಾರಿ: 2013ರಲ್ಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನಗೊಂಡಿರಲಿಲ್ಲ. 2020ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದಿಂದ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿತು. ದೇವಗಿರಿ ಯಲ್ಲಾಪುರ ಗ್ರಾಮದಲ್ಲಿ 50 ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹೈದರಾಬಾದ್ ಮೂಲದ ಕೆಬಿಆರ್ ಇನಾ ಟೆಕ್ ಸಂಸ್ಥೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದೆ. 2020ರ ನ.13ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2021-22ನೇ ಸಾಲಿನಿಂದಲೇ ಮೆಡಿಕಲ್ ಕಾಲೇಜು ತರಗತಿ ಶುರುವಾಗಬೇಕಿತ್ತು. ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿತ್ತು. ಅದರಂತೆ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಮೂಲ ಸೌಕರ್ಯದ ಕೊರತೆ ಕಾರಣಕ್ಕೆ ಮೆಡಿಕಲ್ ಕೌನ್ಸಿಲ್‌ನಿಂದ ಅಂತಿಮ ಅನುಮತಿ ದೊರೆತಿರಲಿಲ್ಲ.
ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಹಲವು ಬಾರಿ ಸಭೆ ನಡೆಸಿ ವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಬರುವ ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಮುಖ್ಯ ಕಟ್ಟಡ, 70 ಹಾಸಿಗೆಗಳ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಸಂಕೀರ್ಣ, ತುರ್ತು ನಿಗಾ ಘಟಕ ಹಾಗೂ ಆರ್ಥೋ ಘಟಕಗಳ ಸಂಕೀರ್ಣ ನಿರ್ಮಾಣವಾಗುತ್ತಿದೆ. ಐದು ಅಂತಸ್ತಿನ 375 ವಿದ್ಯಾರ್ಥಿಗಳು ವಾಸ ಮಾಡುವ ಬಾಲಕರ ವಿದ್ಯಾರ್ಥಿ ನಿಲಯ, ಐದು ಅಂತಸ್ತಿನ 375 ವಿದ್ಯಾರ್ಥಿನಿಯರು ವಾಸ ಮಾಡುವ ಬಾಲಕಿಯರ ವಿದ್ಯಾರ್ಥಿ ನಿಲಯ, ನಾಲ್ಕು ಅಂತಸ್ತಿನ 32 ಬೋಧಕರ, ವೈದ್ಯರ ವಸತಿಗೃಹಗಳು, ಆರು ಅಂತಸ್ತಿನಲ್ಲಿ 48 ಬೋಧಕೇತರ ವಸತಿಗೃಹಗಳು, ಆರು ಅಂತಸ್ತಿನ ಶುಶ್ರೂಷಕಿಯರ 72 ವಸತಿ ಗೃಹಗಳು, ಡೀನ್ ಹಾಗೂ ಪ್ರಾಂಶುಪಾಲರಿಗಾಗಿ ತಲಾ ಒಂದು ವಸತಿ ಗೃಹಗಳ ನಿರ್ಮಾಣ ಪ್ರಗತಿಯಲ್ಲಿದೆ.
ಪ್ರಗತಿಯಲ್ಲಿದೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ: ಹಿಮ್ಸ್‌ನ ನಿರ್ದೇಶಕರಾಗಿ ಡಾ|ಉದಯ ಮುಳಗುಂದ ಅವರನ್ನು ಇತ್ತೀಚೆಗೆ ಸರ್ಕಾರ ನೇಮಕ ಮಾಡಿತ್ತು. ಈಗಾಗಲೇ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆ ನೇಮಕ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. 5 ಪ್ರೊಫೆಸರ್, 17 ಅಸೋಸಿಯೇಟ್ ಪ್ರೊಫೆಸರ್, 31 ಅಸಿಸ್ಟಂಟ್ ಪ್ರೊಫೆಸರ್, 14 ಸೀನಿಯರ್ ರೆಸಿಡೆಂಟ್ ಹಾಗೂ 12 ಟ್ಯೂಟರ್ಸ್ ಸೇರಿದಂತೆ 79 ಹುದ್ದೆ ನೇಮಕಾತಿಗೆ ಈಗಾಗಲೇ ಸಂದರ್ಶನ ಪೂರ್ಣಗೊಂಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಇದರಲ್ಲಿ 53 ಕಾಯಂ ಹುದ್ದೆಗಳಿಗೆ ಮತ್ತು 26 ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅಂತಿಮ ಆಯ್ಕೆ ಪಟ್ಟಿ ಶೀಘ್ರದಲ್ಲಿ ಪ್ರಕಟಿಸಲಾಗುತ್ತಿದೆ ಎಂದು ನಿರ್ದೇಶಕ ಡಾ|ಉದಯ ಮುಳಗುಂದ ತಿಳಿಸಿದ್ದಾರೆ.
ಈಗಾಗಲೇ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸೆಪ್ಟೆಂಬರ್ ವೇಳೆಗೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಯಲಿದ್ದು, ಆರಂಭಿಕವಾಗಿ ಎಂಜಿನಿಯರಿಂಗ್ ಕಾಲೇಜಿನಲ್ಲೇ ತರಗತಿ ನಡೆಸಲು ಉದ್ದೇಶಿಸಲಾಗಿದೆ. ನವೆಂಬರ್ ವೇಳೆಗೆ ಸ್ವಂತ ಕಟ್ಟಡ ಪೂರ್ಣಗೊಳ್ಳಲಿದ್ದು, ಬಳಿಕ ಅಲ್ಲಿಯೇ ಎಂಬಿಬಿಎಸ್ ವಿದ್ಯಾರ್ಥಿಗಳ ತರಗತಿ ನಡೆಯಲಿದೆ.
-ಡಾ|ಉದಯ ಮುಳಗುಂದ, ಮೆಡಿಕಲ್ ಕಾಲೇಜು ನಿರ್ದೇಶಕರು